ಏರ್ಪೋರ್ಟ್ ನಲ್ಲಿ ಬ್ಯಾಗ್ ಚೆಕಿಂಗ್ ವೇಳೆ ಬಾಂಬ್ ಇದೆ ಎಂದು ತಮಾಷೆ ಮಾಡಿದ್ದ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿರುವ ಘಟನೆ ಕೇರಳದ ಕೊಚ್ಚಿನ್ ಏರ್ಪೋರ್ಟ್ನಲ್ಲಿ ನಡೆದಿದೆ.
ಸೆಕ್ಯುರಿಟಿ ಚೆಕ್ಇನ್ ಅಧಿಕಾರಿಗಳು ತಮ್ಮ ಬ್ಯಾಗ್ ತಪಾಸಣೆ ಮಾಡುತ್ತಿದ್ದ ವೇಳೆ, ತನ್ನ ಬ್ಯಾಗ್ನಲ್ಲಿ ಏನೂ ಬಾಂಬ್ ಇಲ್ವಲ್ಲಾ ಎಂದು 42 ವರ್ಷದ ಮನೋಜ್ ಕುಮಾರ್ ಹೇಳಿದ್ದಾನೆ.
ಈತ ಕೊಚ್ಚಿಯಿಂದ ಮುಂಬೈಗೆ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಬೇಕಿತ್ತು. ಅವರ ಹೇಳಿಕೆ ಕಳವಳಕ್ಕೆ ಕಾರಣವಾಯಿತು. ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ (ಬಿಡಿಡಿಎಸ್) ಅವರ ಕ್ಯಾಬಿನ್ ಮತ್ತು ಸಾಮಾನುಗಳನ್ನು ಸಂಪೂರ್ಣವಾಗಿ ಶೋಧಿಸಿದೆ.
ಅನುಮಾನಾಸ್ಪದವಾಗಿ ಏನೂ ಪತ್ತೆಯಾಗದಿದ್ದರೂ, ಕುಮಾರ್ ಅವರನ್ನು ವಿಮಾನದಿಂದ ಇಳಿಸಿ ಕರೆದೊಯ್ದು ವಿಚಾರಣೆಗಾಗಿ ಸ್ಥಳೀಯ ಪೊಲೀಸರಿಗೆ ಒಪ್ಪಿಸಿದ್ದಾರೆ. ವಿಮಾನ ಹೊರಟರೂ ಅವರಿಗೆ ಪ್ರಯಾಣ ಮಾಡಲು ಅವಕಾಶ ಕೊಡಲಿಲ್ಲ.
ಹೆಚ್ಚು ಭದ್ರತೆಗೆ ಒಳಪಡುವ ಪ್ರದೇಶದಲ್ಲಿ ಬಾಂಬ್ ನಂತಹ ಅಪಾಯಕಾರಿ ವಿಷಯದ ಬಗ್ಗೆ ಮಾತನಾಡಬಾರದು ಎಂಬುದಕ್ಕೆ ಇದೊಂದು ಮುಖ್ಯ ಉದಾಹರಣೆಯಾಗಿದೆ.