ಬಾಲಕಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿಯ ಶವಸಂಸ್ಕಾರಕ್ಕೆ, ಆತನ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಪ್ರಮುಖ ಆರೋಪಿ ಅಸ್ಲಂ ನಗೋನ್ ಜಿಲ್ಲೆಯ ಧಿಂಗ್ ಎಂಬಲ್ಲಿ ಇಂದು ನಸುಕಿನಲ್ಲಿ ಕೆರೆಗೆ ಹಾರಿದ್ದ. ಈಜಲು ಬರದ ಕಾರಣ ಮೃತಪಟ್ಟಿದ್ದ.
ಆರೋಪಿಯ ಕುಟುಂಬವಿರುವ ‘ಬೊರ್ಭೆಟಿ’ ಗ್ರಾಮಸ್ಥರು, ಆರೋಪಿಯ ಕುಟುಂಬಕ್ಕೆ ಬಹಿಷ್ಕಾರ ಹಾಕಲು ತೀರ್ಮಾನಿಸಿದ್ದಾರೆ ಎಂದು ವರದಿಯಾಗಿದೆ.
ಆರೋಪಿ ಮೃತಪಟ್ಟ ಬೆನ್ನಲ್ಲೇ ಶನಿವಾರ ಬೆಳಿಗ್ಗೆ ಸಭೆ ನಡೆಸಿರುವ ಗ್ರಾಮಸ್ಥರು, ಮೂರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ.
ಗ್ರಾಮದ ಸ್ಮಶಾನದಲ್ಲಿ ಶವಸಂಸ್ಕಾರ ನಡೆಸಲು ಅವಕಾಶ ನೀಡುವುದಿಲ್ಲ. ಅಂತಿಮ ವಿಧಿವಿಧಾನದಲ್ಲಿ ಪಾಲ್ಗೊಳ್ಳುವುದಿಲ್ಲ ಮತ್ತು ಆರೋಪಿಯ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹೇರಲು ನಿರ್ಧರಿಸಿದ್ದೇವೆ ಎಂದು ಊರಿನ ಹಿರಿಯ ಮೊಹಮ್ಮದ್ ಶಹಜಹಾನ್ ಅಲಿ ಚೌಧರಿ ತಿಳಿಸಿದ್ದಾರೆ.
ಗ್ರಾಮದ ಯುವಕರ ಕೃತ್ಯದಿಂದ ನಮಗೆಲ್ಲ ಅವಮಾನವಾಗಿದೆ. ಕೃತ್ಯವನ್ನು ವಿರೋಧಿಸಿ ಗ್ರಾಮದ ಮಸೀದಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸುವುದಾಗಿ ಹೇಳಿದ್ದಾರೆ.