ಉತ್ತರ ಕನ್ನಡದ ಅಂಕೋಲಾದಲ್ಲಿ ನಡೆದ ಗುಡ್ಡೆ ಕುಸಿತದ ಸ್ಥಳದಲ್ಲಿ ರಕ್ಷಣ ಕಾರ್ಯ 6ನೇ ದಿವೂ ಮುಂದುವರೆದಿದೆ.
ಈ ಮಧ್ಯೆ ರಕ್ಷಣಾ ಕಾರ್ಯಾಚರಣೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ಆರೋಪವು ಕೇಳಿ ಬಂದಿದೆ. ಕರ್ನಾಟಕದ ಮಾಧ್ಯಮಗಳು ಈ ಬಗ್ಗೆ ಸರಿಯಾಗಿ ಸುದ್ದಿಯನ್ನು ಬಿತ್ತರಿಸುತ್ತಿಲ್ಲ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಟೀಕಿಸಿದ್ದಾರೆ. ಕೇರಳದ ಮಾಧ್ಯಮಗಳು ಘಟನಾ ಸ್ಥಳಕ್ಕೆ ತೆರಳಿ ವರದಿಯನ್ನು ಮಾಡುತ್ತಿದೆ.
ಈ ಮಧ್ಯೆ ದುರ್ಘಟನೆಯ ಬಳಿಕ ನಾಪತ್ತೆಯಾದ ಕೇರಳ ಮೂಲದ ಲಾರಿ ಚಾಲಕ ಅರ್ಜುನನ ಹುಡುಕಾಟ ತೀವ್ರಗೊಳಿಸಲು ಕೇಂದ್ರ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಕೋರಿ ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.
ಕೇರಳ ಮೂಲದ ವಕೀಲ ಕೆ. ಆರ್. ಸುಭಾಷ್ ಚಂದ್ರನ್ ಪಿಐಎಲ್ ಸಲ್ಲಿಸಿದ್ದು, ಹಿರಿಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರ ಮುಂದೆ ಅರ್ಜಿ ಮಂಡಿಸಲು ಸುಪ್ರೀಂಕೋರ್ಟ್ ರಿಜಿಸ್ಟ್ರಿ ಅನುಮತಿಯನ್ನು ನೀಡಿದೆ.
ಲಾರಿಯಲ್ಲಿ ಜೋಯಿಡಾದಿಂದ ಕೇರಳಕ್ಕೆ ಹೊರಟಿದ್ದ ಅರ್ಜುನ ಶಿರೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತ ಉಂಟಾದ ಬಳಿಕ ನಾಪತ್ತೆಯಾಗಿದ್ದಾರೆ. ಈಗಾಗಲೇ ಗುಡ್ಡೆ ಕುಸಿತದಲ್ಲಿ ಹಲವರು ಮೃತಪಟ್ಟಿದ್ದು, ರಕ್ಷಣಾ ಕಾರ್ಯ ಚರಣೆ ಮುಂದುವರಿದಿದೆ.
ಅರ್ಜುನ ಚಾಲನೆ ಮಾಡುತ್ತಿದ್ದ ಲಾರಿಯ ಮೇಲೆ ಸುಮಾರು 60 ಟನ್ ಮಣ್ಣು ಬಿದ್ದಿದೆ. ಆದರೆ ಅವರ ಮೊಬೈಲ್ ರಿಂಗ್ ಆಗುತ್ತಿದೆ. ಬೇಗ ಮಣ್ಣು ತೆಗೆಯುವ ಕಾರ್ಯಾಚರಣೆ ನಡೆಸಿದರೆ ಅರ್ಜುನ ಬದುಕುಳಿಯುವ ಸಾಧ್ಯತೆ ಇದೆ ಎಂದು ಕುಟುಂಬ ಮೂಲಗಳು ಹೇಳಿಕೊಂಡಿದೆ.