ಅಮೆರಿಕಾದ ಅಧ್ಯಕ್ಷ ಜೋ ಬೈಡನ್ ಸೋಮವಾರ ರಾತ್ರಿ ತಮ್ಮ ರಾಜಕೀಯದ ಕೊನೆಯ ಭಾಷಣ ಮಾಡಿದ್ದು ಈ ವೇಳೆ ನೆರೆದಿದ್ದ ಜನಸಮೂಹ ಚಪ್ಪಾಳೆಯ ಸುರಿಮಳೆ ಗೈದಿದ್ದಾರೆ. ಭಾಷಣದ ವೇಳೆ ಬೈಡನ್ ಭಾವುಕರಾದ ಪ್ರಸಂಗವು ನಡೆಯಿತು.
ಡೆಮಾಕ್ರಟಿಕ್ ನ್ಯಾಷನಲ್ ಸಮಾವೇಶವನ್ನು ಉದ್ದೇಶಿಸಿ ಭಾಷಣ ಮಾಡಿದ ಜೋ ಬೈಡನ್ಗೆ ಅಮೆರಿಕಾದ ಜನರು ವಿದಾಯ ಹೇಳಿದರು.
ಸಮಾವೇಶದಲ್ಲಿ ನೆರೆದಿದ್ದವರು, ಡೆಮಾಕ್ರಟಿಕ್ ನ್ಯಾಷನಲ್ ಪಕ್ಷದ ಬೆಂಬಲಿಗರು ನಿರಂತರ 4 ನಿಮಿಷಗಳ ಕಾಲ ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ತಮ್ಮ ಅಧ್ಯಕ್ಷನನ್ನು ಬೀಳ್ಕೊಟ್ಟರು.
ಕೆಲವೊಂದು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ 81 ವರ್ಷದ ಜೋ ಬೈಡನ್ ಮುಂದಿನ ಚುನಾವಣೆಯಿಂದ ಹಿಂದೆ ಸರಿಯಬೇಕು ಎಂಬ ಮಾತುಗಳು ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸದಿರಲು ಬೈಡನ್ ನಿರ್ಧರಿಸಿದ್ದರು. ಅಲ್ಲದೆ ನ್ಯಾಷನಲ್ ಡೆಮಾಕ್ರಟಿಕ್ ಪಕ್ಷದ ಮುಂದಿನ ಅಧ್ಯಕ್ಷ ಅಭ್ಯರ್ಥಿಯನ್ನಾಗಿ ಕಮಲಾ ಹ್ಯಾರಿಸ್ ಹೆಸರು ಸೂಚಿಸುವ ಮೂಲಕ ಸಕ್ರಿಯ ರಾಜಕಾರಣದಿಂದ ಜೋ ಬೈಡನ್ ದೂರ ಸರಿದರು.
ನಾನು ನನ್ನ ಬದುಕಿನಲ್ಲಿ ಅನೇಕ ತಪ್ಪುಗಳನ್ನು ಮಾಡಿದ್ದೇನೆ. ಆದ್ರೆ ನಾನು ದೇಶಕ್ಕೆ ಹೆಚ್ಚು ಒಳ್ಳೆಯದನ್ನೇ ನೀಡಿದ್ದೇನೆ ಎಂದು ಬೈಡನ್ ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ತಮ್ಮ ಭಾಷಣದುದ್ದಕ್ಕೂ ನೇರ ಹಾಗೂ ಧೈರ್ಯವಂತಿಕೆಯನ್ನೇ ಕಾಯ್ದುಕೊಂಡು ಮಾತನಾಡಿದ ಜೋ ಬೈಡನ್, ತಮ್ಮ ಆಡಳಿತಾವಧಿಯಲ್ಲಿ ತೆಗೆದುಕೊಂಡು ನಿರ್ಧಾರಗಳ ಸಮರ್ಥನೆಯನ್ನು ಮಾಡಿದ್ದಾರೆ.