ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಪಕ್ಕದಲ್ಲೇ ಹೈಸ್ಪೀಡ್ ರೈಲು ಹಾದು ಹೋಗಿದ್ದರಿಂದ ಸ್ವಲ್ಪದರಲ್ಲೇ ಅವರು ಅಪಾಯದಿಂದ ಪಾರಾಗಿದ್ದಾರೆ.
ಗುರುವಾರ ಉನ್ನತ ಅಧಿಕಾರಿಗಳೊಂದಿಗೆ ಅವರು ಪ್ರವಾಹ ಪೀಡಿತ ಮಧುರಾನಗರದ ಬುಡಮೇರುಗೆ ಭೇಟಿ ನೀಡಿದ್ದರು. ಚಂದ್ರಬಾಬು ನಾಯ್ಡು ಅವರು ರೈಲ್ವೆ ಸೇತುವೆಯ ಮೇಲೆ ನಿಂತು ಪ್ರವಾಹ ಪರಿಸ್ಥಿತಿಯ ಅವಲೋಕನ ನಡೆಸುತ್ತಿದ್ದರು.
ಈ ವೇಳೆ ಇದ್ದಕ್ಕಿದ್ದಂತೆ ಹೈಸ್ಪೀಡ್ ರೈಲು ಬಂದಿದೆ. ಕೂಡಲೇ ತಮ್ಮ ಭದ್ರತಾ ಸಿಬ್ಬಂದಿಯೊಂದಿಗೆ ಬದಿಯಲ್ಲಿ ಬಂದು ನಿಂತಿದ್ದರಿಂದ ಭಾರೀ ಅವಘಡವೊಂದು ತಪ್ಪಿದಂತಾಗಿದೆ. ಅದೃಷ್ಟವಶಾತ್ ಅವರಿಗೆ ಏನೂ ಆಗಲಿಲ್ಲ ಎಂದು ಸ್ಪಷ್ಟವಾಗಿ ವೀಡಿಯೋದಲ್ಲಿ ಕಾಣಬಹುದು.
ಭಾರೀ ಮಳೆಯಿಂದ ಆಂಧ್ರಪ್ರದೇಶದಲ್ಲಿ ಪ್ರವಾಹ ಉಂಟಾಗಿ ಹಾನಿ ಸಂಭವಿಸಿದೆ. ನದಿಗಳು ಉಕ್ಕಿ ಹರಿಯುತ್ತಿದ್ದು, ನೂರಾರು ಪ್ರದೇಶಗಳು ನೀರಿನಲ್ಲಿ ಮುಳುಗಿವೆ. ಬಳಿಕ ಮುಖ್ಯಮಂತ್ರಿಗಳು ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಿ ಜನರ ರಕ್ಷಣೆಗೆ ಮುಂದಾಗುವಂತೆ ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ.