ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಬಳಿ ಭೂ ಕುಸಿತ ಪ್ರಕರಣಕ್ಕೆ ಸಂಬಂಧಿಸಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಈ ಮಧ್ಯೆ ರಾಷ್ಟ್ರೀಯ ಹೆದ್ದಾರಿ 66ರ ಬಳಿ ಗುಡ್ಡ ಕುಸಿತ ಸಂಭವಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ (ಜಿಎಸ್ ಐ) ಸರ್ಕಾರಕ್ಕೆ ಪ್ರಾಥಮಿಕ ವರದಿ ಸಲ್ಲಿಸಿದ್ದು, ಕಾಮಗಾರಿಗಳ ವಿಧಾನಗಳ ಬಗ್ಗೆ ಹಲವು ಪ್ರಶ್ನೆಗಳನ್ನು ಮುಂದಿಟ್ಟಿದೆ. ಇದಲ್ಲದೆ ಹೆಚ್ಚಿನ ಹಾನಿ ತಡೆಗಟ್ಟಲು ತಕ್ಷಣದ ಹಾಗೂ ದೀರ್ಘಕಾಲೀನ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.
ಕಾಮಗಾರಿಯಿಂದಾಗಿ ನೈಸರ್ಗಿಕ ಒಳಚರಂಡಿ ಹರಿವಿಗೆ ತೊಂದರೆಯಾಗಿದೆ ಇಳಿಜಾರು ಪ್ರದೇಶ, ಎಡ ಪಾರ್ಶ್ವ ರಚನಾತ್ಮಕವಾಗಿ ವಿರೂಪಗೊಂಡಿದೆ. ಇಳಿಜಾರಿನಲ್ಲಿ ಮಾನವ ಹಸ್ತಕ್ಷೇಪ ಕಂಡುಬರುತ್ತಿದೆ. ಕಡಿಮೆ ಅವಧಿಯಲ್ಲಿ 503 ಮೀ.ಮಿ ಮಳೆಯಾಗಿರುವುದು ಕೂಡ ಘಟನೆಗೆ ಕಾರಣ ಎನ್ನಬಹುದು ಎಂದು ಸಮೀಕ್ಷೆ ತಿಳಿಸಿದೆ.
ಮಳೆ ನೀರಿನ ನೈಸರ್ಗಿಕ ತಡೆಗಳು ಮಾಯವಾಗಿರುವುದು ಹಾಗೂ ಕಡಿದಾದ ಇಳಿಜಾರಿನ ಪ್ರದೇಶ ಸೃಷ್ಟಿಯಾಗಿರುವುದು ಭೂಕುಸಿತಕ್ಕೆ ಪ್ರಮುಖ ಕಾರಣ ಎಂದು ಸಮೀಕ್ಷೆಯು ಹೇಳಿದೆ.