ಆಜಾನ್ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿ ಮೌನವಾಗಿ ನಿಂತು ಗೌರವವನ್ನು ಸೂಚಿಸಿದ್ದಾರೆ.
ಬೆಂಗಳೂರಿನ ಶಿವಾಜಿನಗರದಲ್ಲಿ ಚರಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟಿಸಿದ ಬಳಿಕ ಭಾಷಣ ಆರಂಭಿಸುತ್ತಿದ್ದಂತೆಯೇ ಆಜಾನ್ ಶುರುವಾಗಿದೆ.ಆಜಾನ್ ಕೂಗು ಕೇಳಿಸಿದ ಸಿದ್ದರಾಮಯ್ಯನವರು ತಮ್ಮ ಭಾಷಣವನ್ನು ನಿಲ್ಲಿಸಿ ಮೌನವಾಗಿ ನಿಂತರುವ ಪ್ರಸಂಗ ನಡೆದಿದೆ. ಆಜಾನ್ ಮುಗಿಯುವವರೆಗೂ ಅಂದರೆ ಸುಮಾರು ಐದು ನಿಮಿಷಗಳ ಕಾಲ ಏನು ಮಾತನಾಡದೇ ಮೌನಕ್ಕೆ ಶರಣಾಗಿದ್ದಾರೆ. ನಂತರ ಆಜಾನ್ ಮುಗಿದ ಬಳಿಕ ಸಿದ್ದರಾಮಯ್ಯನವರು ತಮ್ಮ ಭಾಷಣವನ್ನು ಮುಂದುವರಿಸಿದರು.
ಶಿವಾಜಿನಗರದ ಬ್ರಾಡ್ ವೇ ರಸ್ತೆಯಲ್ಲಿ 4 ಕೋಟಿ ವೆಚ್ಚದಲ್ಲಿ 130 ಹಾಸಿಗೆಗಳುಳ್ಳ ಚರಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲಾಗಿದ್ದು, ಇದನ್ನು ಇಂದು ಅಧಿಕೃತವಾಗಿ ಸಿಎಂ, ಡಿಸಿಎಂ ಸೇರಿದಂತೆ ಸಚಿವರು ಶಾಸಕರು ಸೇರಿಕೊಂಡು ಉದ್ಘಾಟಿಸಿದರು.