ಲಾರಿ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ವಿದ್ಯಾರ್ಥಿಗಳು ಮೃತಪಟ್ಟ ಘಟನೆ ಯಲಹಂಕ ಸಮೀಪ ನಡೆದಿದೆ.
ಜಿಕೆವಿಕೆ ಆವರಣದಲ್ಲಿ ಇರುವ ಬಾಗಲಕೋಟೆಯ ತೋಟಗಾರಿಕೆ ವಿವಿಯ ವಿದ್ಯಾರ್ಥಿಗಳಾದ ರೋಹಿತ್ (21), ಹರ್ಷವರ್ಧನ್ (22) ಹಾಗೂ ಸುಚಿತ್ (22) ಮೃತರು.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಮಂಗಳವಾರ ರಾತ್ರಿ 1 ಗಂಟೆಗೆ ಒಂದೇ ಬೈಕ್‌ನಲ್ಲಿ ಮೂವರು ವಿದ್ಯಾರ್ಥಿಗಳು ಜಾಲಿ ರೈಡ್‌ಗೆ ಹೋಗಿ ಹಾಸ್ಟೆಲ್‌ಗೆ ಮರಳುವಾಗ ಚಿಕ್ಕಜಾಲ ಸಮೀಪದ ಡ್ಯಾಶ್ ಸ್ಯ್ಕಾವರ್ ಮುಂದೆ ಅವಘಡ ಸಂಭವಿಸಿದೆ. ಅಪಘಾತದ ಬಳಿಕ ತಪ್ಪಿಸಿಕೊಂಡಿದ್ದ ಲಾರಿ ಚಾಲಕನನ್ನು ಚಿಕ್ಕಜಾಲ ಸಂಚಾರ ಪೊಲೀಸರು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಕೆವಿಕೆ ಆವರಣದಲ್ಲಿ ಬಾಗಲಕೋಟೆಯ ತೋಟಗಾರಿಕೆ ವಿವಿಯ ಅಧ್ಯಯನ ಕೇಂದ್ರವಿದ್ದು, ಅಂತಿಮ ವರ್ಷದ ಬಿಎಸ್ಸಿಯಲ್ಲಿ ಹೆಬ್ಬಾಳದ ಸುಚಿತ್, ಚಿಕ್ಕಬಳ್ಳಾಪುರ ಜಿಲ್ಲೆಯ ರೋಹಿತ್ ಮತ್ತು ಕೋಲಾರ ಜಿಲ್ಲೆ ಶ್ರೀನಿವಾಪುರ ತಾಲೂಕಿನ ಹರ್ಷ ಓದುತ್ತಿದ್ದರು. ಹಾಸ್ಟೆಲ್‌ನಲ್ಲಿ ರೋಹಿತ್ ಮತ್ತು ಹರ್ಷ ನೆಲೆಸಿದ್ದರು. ಮಂಗಳವಾರ ರಾತ್ರಿ ಕೆಐಎ ರಸ್ತೆಯಲ್ಲಿ ಜಾಲಿ ರೈಡ್‌ಗೆ ಎರಡು ಬೈಕ್‌ಗಳಲ್ಲಿ ಐವರು ಸ್ನೇಹಿತರು ತೆರಳಿದ್ದರು. ಹರ್ಷ, ಸುಚಿತ್ ಮತ್ತು ರೋಹಿತ್ ತ್ರಿಬಲ್ ರೈಡಿಂಗ್‌ನಲ್ಲಿ ಹೋಗಿದ್ದರು. ಕೆಐಎಯಿಂದ ಈ ಸ್ನೇಹಿತರು ಮರಳುವಾಗ ಬೈಕ್‌ಗೆ ಚಿಕ್ಕಜಾಲದ ಡ್ಯಾಶ್ ಚೌಕದ ಮುಂದೆ ಕಲ್ಲು ಸಾಗಣೆ ಲಾರಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ.