ಗ್ರಾಹಕರ ಸೋಗಿನಲ್ಲಿ ಹೋಟೆಲ್ ಗೆ ಬಂದ ನಾಲ್ವರ ಗುಂಪು ಹೊಟ್ಟೆತುಂಬ ಊಟ ಮಾಡಿ ಬಳಿಕ ಫೋನ್ ಪೇ ಮೂಲಕ ಬಿಲ್ ಪೇ ಮಾಡಿದಂತೆ ಯಾಮಾರಿಸುತ್ತಿದ್ದ ಖತರ್ನಾಕ್ ಕಳ್ಳರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿರುವ ಘಟನೆ ನಡೆದಿದೆ.
ಬೆಂಗಳೂರಿನ ಹೋಟೆಲ್ ಒಂದರಲ್ಲಿ ಈ ಘಟನೆ ನಡೆದಿದ್ದು, ಹೋಟೆಲ್ ವ್ಯವಸ್ಥಾಪಕರೊಬ್ಬರು ವಂಚಕರನ್ನು ರೆಡ್ ಹ್ಯಾಂಡ್ ಆಗಿಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಓರ್ವ ಮಹಿಳೆಯೊಂದಿಗೆ ಹೋಟೆಲ್ ಗೆ ಬಂದ ಮೂವರು ಯುವಕರು ಹೋಟೆಲ್ ನಲ್ಲಿ ಊಟ ಮಾಡಿದ್ದಾರೆ. 750 ರೂ ಬಿಲ್ ಆಗಿದೆ. ಬಿಲ್ ಪಾವತಿಸಲು ಕೌಂಟರ್ ಬಳಿ ಬಂದಾಗ ವ್ಯವಸ್ಥಾಪಕರು ಫೋನ್ ಪೇ ಮಾಡುವಂತೆ ಹೇಳಿ ಸ್ಕ್ಯಾನರ್ ನೀಡಿದ್ದಾರೆ. ವಂಚಕರು ಮೊಬೈಲ್ ನ್ನು ಸ್ಕ್ಯಾನರ್ ಬಳಿ ಹಿಡಿದು 750 ರೂ ಪೇ ಆಗಿದೆ ಎಂದು ತೋರಿಸಿ ಜಾಗ ಖಾಲಿ ಮಾಡಿದ್ದಾರೆ. ಆದರೆ ಹಣ ಅಕೌಂಟ್ ಗೆ ಬಂದಿಲ್ಲ. ಯಾವುದೇ ಮೆಸೇಜ್ ಕೂಡ ಬಂದಿಲ್ಲ. ಸರ್ವರ್ ಸ್ಲೋ ಇರಬಹುದು ಎಂದುಕೊಂಡ ವ್ಯವಸ್ಥಾಪಕರು ಹೊರಬಂದು ಮತ್ತೆ ಮೊಬೈಲ್ ಚೆಕ್ ಮಾಡಿದ್ದಾರೆ. ಯಾವುದೇ ಮೆಸೇಜ್ ತೋರುತ್ತಿಲ್ಲ. ತಕ್ಷಣ ಎಚ್ಚೆತ್ತ ಅವರು ಹೋಟೆಲ್ ನಿಂದ ತೆರಳುತ್ತಿದ ನಾಲ್ವರನ್ನು ಹಿಡಿದು ವಾಪಾಸ್ ಕರೆತಂದು ವಿಚಾರಿಸಿದ್ದಾರೆ.
ವಂಚಕರ ಮೊಬೈಲ್ ವಶಕ್ಕೆ ಪಡೆದು ಪರಿಶೀಲಿಸಿದಾಗ ಫೋನ್ ಪೇ ಸ್ಕ್ಯಾನರ್ ರೀತಿ ಕಾಣುವ ನಕಲಿ ಸ್ಕ್ಯಾನರ್ ವಂಚಕರ ಮೊಬೈಲ್ ನಲ್ಲಿದೆ. ಆದರೆ ಅಸಲಿಗೆ ಫೋನ್ ಪೇ ಸ್ಕ್ಯಾನರನ್ನು ಪ್ಲೇ ಸ್ಟೋರ್ ರಿಂದ ಡೌನ್ ಲೋಡ್ ಮಾಡಿಕೊಂಡೇ ಇಲ್ಲ. ಫೋನ್ ಪೇ ಮೂಲಕ ಹಣ ಪಾವತಿಸಿದಂತೆ ವಂಚಿಸಿ ಎಸ್ಕೇಪ್ ಆಗುತ್ತಿದ್ದರು. ಅಷ್ಟೇ ಅಲ್ಲ, ನಕಲಿ ಸ್ಕ್ಯಾನರ್ ಮೇಲೆ ಮೊಬೈಲ್ ಇಟ್ಟು ಹಣದ ಮೊತ್ತ ಟೈಪ್ ಮಾಡಿ ಯಾವುದೇ ಪಾಸ್ ವರ್ಡ್ ಕೊಟ್ಟರೂ ಹಣ ಸಂದಾಯವಾಗಿಬಿಡುತ್ತದೆ. ವಂಚಕರ ಅಸಲಿ ಮುಖವನ್ನು ಹೋಟೆಲ್ ವ್ಯವಸ್ಥಾಪಕರು ರೆಡ್ ಹ್ಯಾಂಡ್ ಆಗಿ ಬಯಲಿಗೆಳೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.