ಬೆಳಗಾವಿಯ ನಾವಗೆ ಗ್ರಾಮದ ಕಾರ್ಖಾನೆಯ ಅಗ್ನಿ ಅವಘಡದಲ್ಲಿ ಕಾರ್ಮಿಕ ಯಲ್ಲಪ್ಪ ಸಣ್ಣಗೌಡ ಗುಂಡ್ಯಾಗೋಳ (20) ಮೃತಪಟ್ಟಿದ್ದಾರೆ.
ಬೆಳಗಾವಿ ಜಿಲ್ಲೆಯ ನಾವಗೆ ಗ್ರಾಮದ ಹೊರ ವಲಯದಲ್ಲಿ ಇರುವ ಸ್ನೇಹಂ ಟೇಪ್ ಕಾರ್ಖಾನೆಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಮಾರ್ಕಂಡೇಯ ನಗರ ನಿವಾಸಿಯಾಗಿದ್ದ ಯಲ್ಲಪ್ಪ ಗುಂಡ್ಯಾಗೋಳ(20) ಬೆಂಕಿಯಲ್ಲಿ ಬೆಂದು ಪ್ರಾಣ ಕಳೆದುಕೊಂಡಿದ್ದಾರೆ.
ಕಾರ್ಯಾಚರಣೆಯ ಬಳಿಕ ಸಿಕ್ಕ ಅವರ ದೇಹದ ಮೂಳೆಗಳನ್ನು, ಅಧಿಕಾರಿಗಳು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ತಂದೆಯ ಕೈಗೆ ಕೊಟ್ಟು ಕಳುಹಿಸಿದ್ದಾರೆ. ಸುಟ್ಟುಹೋದ ಮಗನ ದೇಹದ ಅಲ್ಪಸ್ವಲ್ಪ ಅಂಗಾಂಗಗಳನ್ನು ತಂದೆ ಸಣ್ಣಗೌಡ ಸಂತೆಗೆ ಬಳಸುತ್ತಿದ್ದ ಕೈಚೀಲದಲ್ಲಿ ಹಾಕಿಕೊಂಡು ಮನೆ ಹೋಗುತ್ತಿರುವ ದೃಶ್ಯ ನೋಡುವವರಿಗೆ ದುಃಖ ತರುವಂತೆ ಮಾಡಿತ್ತು.
ಆಂಬುಲೆನ್ಸ್‌ಗಳಿದ್ದರೂ ಕೈಚೀಲದಲ್ಲಿ ದೇಹದ ಅವಶೇಷಗಳನ್ನು ಹಾಕಿ ಕೊಟ್ಟ ಬಗ್ಗೆ ಇದೀಗ ಆಕ್ಷೇಪ ಕೂಡ ವ್ಯಕ್ತವಾಗದೆ.
ಸಣ್ಣಗೌಡ ಅವರ ನಾಲ್ವರು ಮಕ್ಕಳಲ್ಲಿ ಯಲ್ಲಪ್ಪ ಒಬ್ಬನೇ ಗಂಡುಮಗ. ಉಳಿದ ಮೂವರು ಹೆಣ್ಣುಮಕ್ಕಳಿದ್ದಾರೆ. ಪಿಯುಸಿ ಮುಗಿದ ಯಲ್ಲಪ್ಪ ತಂದೆಯ ಕಷ್ಟಕ್ಕೆ ನೆರವಾಗಲು ಶಿಕ್ಷಣ ನಿಲ್ಲಿಸಿ, ಕಾರ್ಖಾನೆಗೆ ಕೆಲಸಕ್ಕೆ ಸೇರಿದ್ದ. ಕೆಲಸಕ್ಕೆ ಸೇರಿ ಕೇವಲ ಮೂರು ತಿಂಗಳಾಗಿತ್ತು. ಇದೀಗ ಸಣ್ಣ ವಯಸ್ಸಿನಲ್ಲೇ ಪ್ರಾಣವನ್ನು ಕಳೆದುಕೊಂಡಿದ್ದಾನೆ.