ಹತ್ತು ಕಂತಿನ ಗೃಹಲಕ್ಷ್ಮಿ ಹಣವನ್ನು ಕೂಡಿಟ್ಟು ಊರಿಗೆ ಹೋಳಿಗೆ ಊಟ ಹಾಕಿಸಿ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಸುಟ್ಟಟ್ಟಿ ಗ್ರಾಮದ ವೃದ್ಧೆಯಾದ ಅಕ್ಕಾತಾಯಿ ಲಂಗೋಟಿ ಅವರು ಪ್ರಶಂಸೆಗೆ ಕಾರಣರಾಗಿದ್ದು, ಅವರಿಗೆ ಕುದ್ದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ ಅಭಿನಂದನೆ ಸಲ್ಲಿಸಿದ್ದಾರೆ.
ಅಕ್ಕಾತಾಯಿ ಲಂಗೋಟಿ ಅವರು ತಮ್ಮ 10 ಕಂತಿನ ಗೃಹಲಕ್ಷ್ಮಿ ಹಣವನ್ನು ಕೂಡಿಟ್ಟು ಊರಿಗೆ ಹೋಳಿಗೆ ಊಟ ಹಾಕಿಸಿದ್ದಾರೆ. ಗ್ರಾಮದೇವತೆ ಲಕ್ಷ್ಮಿ ದೇವಿಗೆ ಹರಕೆ ಕಟ್ಟಿಕೊಂಡು ಹೋಳಿಗೆ ಮಾಡೋಣ ಬಾ ಎಂದು ಪಕ್ಕದ ಮನೆಯವರ ಜೊತೆಗೆ ಅಜ್ಜಿ ಚರ್ಚೆ ಮಾಡಿದ್ದರು. ಇದಕ್ಕೆ ಗ್ರಾಮದ ಕೆಲ ವೃದ್ದೆಯರಾದ ದುಂಡವ್ವ ನೂಲಿ, ಲಕ್ಕವ್ವ ಹಟ್ಟಿಹೊಳಿ ಸೇರಿದಂತೆ ಹಲವರು ಸಾಥ್ ನೀಡಿದ್ದಾರೆ. ಇದರಿಂದ ತಮ್ಮ ಕೈಲಾದಷ್ಟು ಹಣ ಜಮಾವಣೆ ಮಾಡಿ ಗೃಹಲಕ್ಷ್ಮಿ ಹಣ ನಿಲ್ಲಿಸದಂತೆ ಹಾಗೂ ಸಿದ್ದರಾಮಯ್ಯನವರಿಗೆ ಒಳ್ಳೆಯದಾಗಲಿ ಎಂದು ಊರ ದೇವರಿಗೆ ಹರಕೆ ಕಟ್ಟಿಕೊಂಡು ನಿನ್ನೆ ಇಡೀ ಊರಿಗೆ ಹೊಳಿಗೆ ಊಟ ಹಾಕಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಅಕ್ಕಾತಾಯಿ ಲಂಗೋಟಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕರೆ ಮಾಡಿ ಮಾತನಾಡಿದ್ದಾರೆ. ನಿಮ್ಮ ಕಾರ್ಯ ನೋಡಿ ಬಹಳಷ್ಟು ಖುಷಿಯಾಗಿದೆ. ಗೃಹಲಕ್ಷ್ಮಿ ಯೋಜನೆ ನಿಮ್ಮಂಥವರಿಗೆ ಕೊಟ್ಟು ಸಾರ್ಥಕ ಆಯ್ತು ಎಂದು ಹೇಳಿದ್ದಾರೆ.