ಬೆಲ್ಲದಿಂದ ಚರ್ಮದ ಕಾಂತಿ ಹೆಚ್ಚಳವಾಗುತ್ತದೆ, ಬೆಲ್ಲದಿಂದ ಚರ್ಮದ ಆರೋಗ್ಯ ಸುಧಾರಣೆಯಾಗುತ್ತದೆ ಎಂದು ತಿಳಿದು ಬಂದಿದೆ.
ನೈಸರ್ಗಿಕ ಬೆಲ್ಲವನ್ನು ತಯಾರಿ ಮಾಡುವುದರಿಂದ ಅದು ಆರೋಗ್ಯಕ್ಕೆ ಹಲವು ರೀತಿಯಿಂದ ಉಪಯೋಗವಾಗುತ್ತದೆ. ಬೆಲ್ಲದಲ್ಲಿ ಹೇರಳವಾದ ಖನಿಜಗಳಿವೆ. ಕಬ್ಬಿಣ ಮತ್ತು ಪೊಟ್ಯಾಸಿಯಮ್ ಸಮೃದ್ಧವಾಗಿವೆ. ಹೀಗಾಗಿ ಬೆಲ್ಲ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಬೆಲ್ಲದಲ್ಲಿ ಗ್ಲೈಕೋಲಿಕ್ ಆಮ್ಲ ಹೆಚ್ಚಾಗಿದೆ. ಇದು ಚರ್ಮಕ್ಕೆ ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುತ್ತದೆ. ಬೆಲ್ಲದಿಂದ ತ್ವಚೆಯನ್ನು ತೇವಾಂಶದಿಂದ ಕೂಡಿರುವಂತೆ ಕಾಪಾಡಿಕೊಳ್ಳಬಹುದು. ಬೆಲ್ಲ ಚರ್ಮದ ಮೇಲಿನ ಸತ್ತ ಜೀವಕೋಶಗಳನ್ನು ತೆಗೆದುಹಾಕುತ್ತದೆ. ಮುಖದ ಚರ್ಮವನ್ನು ಆದಷ್ಟು ಮೃದುಗೊಳಿಸುತ್ತದೆ. ಮುಖದ ಮೇಲಿನ ಕಪ್ಪು ಕಲೆಗಳು ಮತ್ತು ಮೊಡವೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮುಖದಲ್ಲಿ ಸುಕ್ಕುಗಳು, ಗೀರುಗಳು ಮತ್ತು ತುರಿಕೆಗಳಂತಹ ಸಮಸ್ಯೆಗಳಿಗೆ ಕೂಡಾ ಬೆಲ್ಲ ಪ್ರಯೋಜನಕಾರಿಯಾಗಿದೆ.
ಒಂದು ಚಮಚ ಬೆಲ್ಲವನ್ನು ತೆಗೆದುಕೊಂಡು ಅದಕ್ಕೆ ಒಂದು ಚಮಚ ಜೇನುತುಪ್ಪ ಮತ್ತು ನಿಂಬೆರಸ ಬೆರೆಸಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಬೇಕು. ಐದು ನಿಮಿಷ ಮಸಾಜ್ ಮಾಡಿ ನಂತರ ಮುಖವನ್ನು ತೊಳೆದುಕೊಳ್ಳಬೇಕು. ಇದು ಆಗಾಗ ಮಾಡಿದರೆ ಮುಖದ ಚರ್ಮ ಮೃದುವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.
ದಿನಾಲೂ ಸ್ವಲ್ಪ ಆರ್ಗಾನಿಕ್ ಬೆಲ್ಲ ತಿಂದರೆ, ದೇಹದಲ್ಲಿ ರಕ್ತ ಸಂಚಾರ ಚೆನ್ನಾಗಿ ಆಗುತ್ತದೆ. ಇದು ಜೀವಕೋಶದ ವಹಿವಾಟನ್ನು ಹೆಚ್ಚಿಸಲಿದ್ದು, ಇದರಿಂದ ಚರ್ಮವು ಕಾಂತಿಯುತವಾಗುತ್ತದೆ. ಬಿಸಿಲಿಗೆ ಮೈ ಒಡ್ಡಿಕೊಂಡರೂ ಚರ್ಮವು ಹಾಳಾಗುವುದಿಲ್ಲ. ಇದಲ್ಲದೆ, ಅದರಲ್ಲಿರುವ ಖನಿಜಗಳು ಮತ್ತು ವಿಟಮಿನ್‌ಗಳು ಅದನ್ನು ತ್ವರಿತವಾಗಿ ಗುಣಪಡಿಸುತ್ತವೆ.