Breaking:

ಬೆಳ್ತಂಗಡಿ; ನೆರಿಯ ಗ್ರಾಮದಲ್ಲಿ ಬಿರುಗಾಳಿ ಮಳೆಗೆ ಜನಜೀವನ ಅಸ್ತವ್ಯಸ್ತ, ಧರೆಗುರುಳಿದ ಮರಗಳು, ವಿದ್ಯುತ್ ಕಂಬಗಳು

ಬೆಳ್ತಂಗಡಿ: ಭಾರೀ ಗಾಳಿ ಮಳೆಗೆ ಬೆಳ್ತಂಗಡಿ ತಾಲೂಕಿನ ನೆರಿಯ ಸೇರಿದಂತೆ ವಿವಿಧೆಡೆ ವ್ಯಾಪಕ ಹಾನಿಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

ಅಣಿಯೂರಿನಿಂದ ನೆರಿಯ ಗ್ರಾಮ ಪಂಚಾಯತ್ ವರೆಗೆ ರಸ್ತೆ ಬದಿಯಲ್ಲಿದ್ದ ಮರಗಳು ಧರೆಗೆ ಉರುಳಿವೆ. ಪೆರಿಯಡ್ಕ ರಸ್ತೆಯಲ್ಲೂ ಹಲವು ಮರಗಳು ನೆಲಕ್ಕುರುಳಿವೆ. ಅಣಿಯೂರು ಬೀಟಿಗೆ ರಸ್ತೆ, ಅಪ್ಪಿಲ ಕುಕ್ಕೆಜಾಲು ರಸ್ತೆ ಸೇರಿದಂತೆ ವಿವಿಧೆಡೆ ಮರಗಳು ಮುರಿದು ಬಿದ್ದಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ.

ಸ್ಥಳೀಯರ ಮಾಹಿತಿ ಪ್ರಕಾರ 40ಕ್ಕೂ ಅಧಿಕ ವಿದ್ಯುತ್ ಕಂಬಗಳು ನೆರಿಯ ಒಂದೇ ಗ್ರಾಮದಲ್ಲಿ ಉರುಳಿಬಿದ್ದಿವೆ. ಇದರಿಂದ ನೆರಿಯ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲೂ ವಿದ್ಯುತ್ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ. ಬಿರುಗಾಳಿಯಿಂದ ಅಡಿಕೆ ಹಾಗೂ ರಬ್ಬರ್ ಕೃಷಿಗೂ ವ್ಯಾಪಕವಾಗಿ ಹಾನಿ ಸಂಭವಿಸಿದೆ. ನೂರಾರು ಸಂಖ್ಯೆಯಲ್ಲಿ ಅಡಿಕೆ ಹಾಗೂ ರಬ್ಬರ್ ಮರಗಳು ಮುರಿದು ಬಿದ್ದಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ.

ನೆರಿಯದಲ್ಲಿ ಮರ ಬಿದ್ದು ಮೂರು ಮನೆಗಳಿಗೂ ಹಾನಿ ಸಂಭವಿಸಿದೆ. ವ್ಯಾಪಕವಾಗಿ ಹಾನಿ ಸಂಭವಿಸಿರುವ ನೆರಿಯ ಗ್ರಾಮದಲ್ಲಿ ಗ್ರಾಮ ಪಂಚಾಯತ್, ಅರಣ್ಯ ಇಲಾಖೆ ಹಾಗೂ ಮೆಸ್ಕಾಂ ನೇತೃತ್ವದಲ್ಲಿ ಮರಗಳ ತೆರವು ಕಾರ್ಯಾಚರಣೆ ನಡೆಯುತ್ತಿದೆ.

 

Share this article

ಟಾಪ್ ನ್ಯೂಸ್