ಸೋಮವಾರ ಸಂಜೆ ಬೆಳ್ತಂಗಡಿ ತಾಲೂಕಿನ ಹಲವೆಡೆ ನದಿಯಲ್ಲಿ ಏಕಾಏಕಿ ಮಣ್ಣುಮಿಶ್ರಿತ ನೀರಿನ ಪ್ರವಾಹ ಬಂದಿದ್ದು ಜನರು ಆತಂಕಕ್ಕೆ ಒಳಗಾಗಿದ್ದರು.
ಒಂದು ವಾರದಿಂದ ಮಳೆ ಕಡಿಮೆಯಾಗಿ ಶಾಂತವಾಗಿದ್ದ ನೇತ್ರಾವತಿ ಮತ್ತು ಮೃತ್ಯುಂಜಯ ನದಿಗಳಲ್ಲಿ ಪ್ರವಾಹದ ಪರಿಸ್ಥಿತಿ ಸೋಮವಾರ ಸಂಜೆ ಕಂಡುಬಂದಿದೆ.
ಬೆಳ್ತಂಗಡಿ ತಾಲೂಕಿನಲ್ಲಿ ಸೋಮವಾರ ಮಧ್ಯಾಹ್ನ ಸಾಮಾನ್ಯ ಮಳೆಯಾಗಿತ್ತು. ಆದರೆ ಸಂಜೆ 5ರ ವೇಳೆಗೆ ನದಿಗಳು ಏಕಾಏಕಿ ತುಂಬಿ ಹರಿಯ ತೊಡಗಿದವು.
ಮುಂಡಾಜೆ, ಕಲ್ಮಂಜ, ಕಡಿರುದ್ಯಾವರ, ಮಿತ್ತಬಾಗಿಲು ಮೊದಲಾದ ಗ್ರಾಮಗಳ ಕಡೆ ಹೆಚ್ಚಿನ ತೋಟಗಳಿಗೆ ಪ್ರವಾಹದ ನೀರು ನುಗ್ಗಿ ಕಡಿರುದ್ಯಾವರದಿಂದ 10 ಕಿಮಿ ದೂರದಲ್ಲಿರುವ ಬಂಡಾಜೆ ಜಲಪಾತ ತುಂಬಿ ಹರಿಯುವ ದೃಶ್ಯ ಕಡಿರುದ್ಯಾವರದಲ್ಲಿ ಗೋಚರಿಸುತ್ತಿತ್ತು.
ನೀರಿನೊಂದಿಗೆ ಅಪಾರ ಪ್ರಮಾಣದ ಮರಮಟ್ಟುಗಳು ತೇಲಿ ಬಂದಿದೆ. ಪಶ್ಚಿಮ ಘಟ್ಟದ ದಟ್ಟಾರಣ್ಯದ ನಡುವೆ ಭೂ ಕುಸಿತವಾಗಿದೆ ಎಂಬ ಸಂಶಯ ಉಂಟಾಗಿದೆ.
ನದಿಗಳಲ್ಲಿ ಪ್ರವಾಹದಂತೆ ಹರಿದುಬಂದ ನೀರು ಕಂಡ ನದಿ ಪಾತ್ರಗಳಲ್ಲಿ ವಾಸಿಸುವ ಜನರು ಭೀತಿಗೊಳಗಾಗಿ. ಹಲವರು ತಮ್ಮ ವಾಸ್ತವ್ಯ ಬದಲಿಸಿದ್ದರು.