ದಾವಣಗೆರೆ: ಜೈಲು ಶಿಕ್ಷೆಯ ಭಯದಿಂದ ನ್ಯಾಯಾಲಯ ದಲ್ಲಿಯೇ ವಿಷ ಸೇವಿಸಿ ಆರೋಪಿಯೊಬ್ಬ ಅಸ್ವಸ್ಥಗೊಂಡ ಘಟನೆ ನಡೆದಿದೆ.
ಕೌಟುಂಬಿಕ ದೌರ್ಜನ್ಯ ಪ್ರಕರಣದಲ್ಲಿನ ಆರೋಪಿ ಫಜಲ್ ಅಲಿ (38) ಶನಿವಾರ) ದಾವಣಗೆರೆ ಜಿಲ್ಲೆಯ ಹರಿಹರದ 2ನೇ ಹೆಚ್ಚುವರಿ ಜೆಎಂಎಫ್ಸಿ ಕೋರ್ಟ್ಗೆ ಹಾಜರಾಗಿದ್ದ. ಈ ವೇಳೆ ನ್ಯಾಯಾಧೀಶರ ಸಮ್ಮುಖದಲ್ಲಿಯೇ ವಿಷ ಸೇವಿಸಿ ತೀವ್ರ ಅಸ್ವಸ್ಥಗೊಂಡಿದ್ದಾನೆ. ಕೂಡಲೇ ಆರೋಪಿಗೆ ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಆರೋಪಿ ಫಜಲ್ ಅಲಿ ಹಾಗೂ ಆತನ ಪತ್ನಿ ವಿಚ್ಚೇಧನ ಪಡೆದಿದ್ದರು. ಬಳಿಕ ಕೋರ್ಟ್ ಆದೇಶದಂತೆ ಪತ್ನಿಗೆ ಜೀವನಾಂಶ ಕೊಡಬೇಕಿದ್ದು, ಕಳೆದ ಕೆಲ ತಿಂಗಳಿಂದ ಪತ್ನಿಗೆ ಜೀವನಾಂಶವನ್ನು ಆರೋಪಿ ನೀಡರಲಿಲ್ಲ. ಈ ವಿಚಾರವನ್ನು ಪತ್ನಿ ಪರ ನ್ಯಾಯವಾದಿಗಳು ನ್ಯಾಯಾಧೀಶರ ಗಮನಕ್ಕೆ ತಂದಿದ್ದರು. ಈ ಹಿನ್ನಲೆ ನ್ಯಾಯಾಧೀಶರಿಂದ ಜೈಲಿಗೆ ಹಾಕುವ ಆದೇಶ ಬರುವ ಭಯದಿಂದ ಕೋರ್ಟ್ಗೆ ಬರುವಾಗಲೇ ಜೇಬಿನಲ್ಲಿ ವಿಷದ ಬಾಟಲ್ ಇಟ್ಟುಕೊಂಡು ಬಂದಿದ್ದ ಫಜಲ್ ಅಲಿ ವಿಷ ಸೇವಿಸಿದ್ದಾನೆ. ಸದ್ಯ ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.