ಮಂಗಳೂರು: ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಸಂಘರ್ಷ ಮತ್ತೆ ತಾರಕಕ್ಕೇರುವ ಎಲ್ಲಾ ಲಕ್ಷಣಗಳು ಕಂಡು ಬಂದಿದೆ.
ರಾಜ್ಯಪಾಲರು ಆಗಸ್ಟ್ ಮಾಸದಲ್ಲಿ ಆರು ಪ್ರಮುಖ ವಿಧೇಯಕಗಳನ್ನು ಹೆಚ್ಚಿನ ಮಾಹಿತಿ ಕೋರಿ ರಾಜ್ಯ ಸರ್ಕಾರಕ್ಕೆ ಹಿಂತಿರುಗಿಸಿದ್ದಾರೆ.
ಕರ್ನಾಟಕ ಸಾರ್ವಜನಿಕ ಪರೀಕ್ಷಾ (ನೇಮಕಾತಿಯಲ್ಲಿ ಭ್ರಷ್ಟಾಚಾರ ಮತ್ತು ಅಕ್ರಮ ತಡೆಯುವ ಕ್ರಮಗಳು) ವಿಧೇ ಯಕ, ಕರ್ನಾಟಕ ಧಾರ್ಮಿಕ ದತ್ತಿ (ತಿದ್ದುಪಡಿ) ವಿಧೇಯಕ, ಕರ್ನಾಟಕ ಟೌನ್ ಅಂಡ್ ಕಂಟ್ರಿ ಪ್ಲಾನಿಂಗ್ (ತಿದ್ದುಪಡಿ) ವಿಧೇಯಕಗಳನ್ನು ಎರಡನೇ ಬಾರಿಗೆ ಹಿಂದಕ್ಕೆ ಕಳುಹಿಸಲಾಗಿದೆ. ಮುಖ್ಯಮಂತ್ರಿಗಳ ಕಾರ್ಯದರ್ಶಿ ಹುದ್ದೆಗೆ ಶಾಸಕರನ್ನು ನೇಮಿಸುವುದಕ್ಕೆ ಇದ್ದಂತಹ ತೊಡಕನ್ನು ನಿವಾರಿಸುವ ಕರ್ನಾಟಕ ಶಾಸಕಾಂಗ ಸದಸ್ಯರ (ಅನರ್ಹತೆ ತಡೆಗಟ್ಟುವಿಕೆ) (ತಿದ್ದುಪಡಿ) ವಿಧೇಯಕವನ್ನು ಆ. 16 ಮತ್ತು 17ರಂದು ಸರ್ಕಾರಕ್ಕೆ ಹಿಂತಿರುಗಿಸಿದ್ದಾರೆ.
ಕರ್ನಾಟಕ ಪುರಸಭೆಗಳು ಮತ್ತು ಕೆಲ ಇತರೆ ಕಾನೂನು (ತಿದ್ದುಪಡಿ) ವಿಧೇಯಕ, ಕರ್ನಾಟಕ ಚಲನಚಿತ್ರ ಮತ್ತು ಸಾಂಸ್ಕೃತಿಕ ಕಲಾವಿದರ ಕಲ್ಯಾಣ ವಿಧೇಯಕ, ಕರ್ನಾಟಕ ಸಹಕಾರ ಸಂಘಗಳ (ತಿದ್ದುಪಡಿ) ವಿಧೇಯಕ, ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ವಿಧೇಯಕ, ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ವಿಧೇಯಕಗಳನ್ನು ಕೂಡಾ ವಾಪಸ್ ಕಳುಹಿಸಿದ್ದಾರೆ. ಉಳಿದಂತೆ ಗದಗ ಬೆಟಗೇರಿ ವ್ಯಾಪಾರ, ಸಂಸ್ಕೃತಿ, ಪ್ರದರ್ಶನ ಪ್ರಾಧಿಕಾರ ವಿಧೇಯಕ, ಕರ್ನಾಟಕ ನೋಂದಣಿ (ತಿದ್ದುಪಡಿ) ವಿಧೇಯಕಗಳನ್ನು ಕಳೆದ ಜು.26ರಂದು ವಾಪಸು ಕಳುಹಿಸಿರುವ ಬಗ್ಗೆ ವರದಿಯಾಗಿದೆ.