ನವದೆಹಲಿ: ನೀಟ್ ಪರೀಕ್ಷೆಯಲ್ಲಿ ಅವ್ಯವಹಾರದ ಬಗ್ಗೆ ದೇಶದಾದ್ಯಂತಆರೋಪ ಕೇಳಿ ಬಂದಿತ್ತು. ಇದೀಗ 12ನೇ ತರಗತಿ ಪರೀಕ್ಷೆಯಲ್ಲಿ ಅನುತ್ತೀರ್ಣಳಾಗಿದ್ದ ಗುಜರಾತಿನ ವಿದ್ಯಾರ್ಥಿನಿಯೋರ್ವಳು ನೀಟ್ ಯುಜಿ ಪರೀಕ್ಷೆಯಲ್ಲಿ 705 ಅಂಕ ಗಳಿಸುವ ಮೂಲಕ ಸುದ್ದಿಯಲ್ಲಿದ್ದಾಳೆ.
ವಿದ್ಯಾರ್ಥಿನಿಗೆ ಪಿಯುಸಿ ಪರೀಕ್ಷೆಯಲ್ಲಿ ಹಾಗೂ ನೀಟ್ ಪರೀಕ್ಷೆಯಲ್ಲಿ ಗಳಿಸಿರುವ ಅಂಕಗಳಲ್ಲಿನ ವ್ಯತ್ಯಾಸದ ಬಗ್ಗೆ ಸಾಮಾಜಿಕ ಮಾಧ್ಯಮ ಬಳಕೆದಾರರು ಪ್ರಶ್ನೆಯೆತ್ತಿದ್ದಾರೆ. ವರದಿ ಪ್ರಕಾರ, ಅಹಮದಾಬಾದ್‌ನ ವಿದ್ಯಾರ್ಥಿನಿಯೊಬ್ಬಳ 12ನೇ ತರಗತಿಯ ಅಂಕಪಟ್ಟಿಯು, ಆಕೆಯ ಕಳಪೆ ಪ್ರದರ್ಶನವನ್ನು ಹೇಳುತ್ತಿದ್ದು , ಭೌತಶಾಸ್ತ್ರದಲ್ಲಿ 21, ರಸಾಯನ ಶಾಸ್ತ್ರದಲ್ಲಿ 31, ಜೀವಶಾಸ್ತ್ರದಲ್ಲಿ 39 ಹಾಗೂ ಇಂಗ್ಲಿಷ್‌ನಲ್ಲಿ 59 ಅಂಕಗಳನ್ನು ಮಾತ್ರ ಗಳಿಸಿದ್ದಾಳೆ ಎಂದು ತೋರಿಸುತ್ತದೆ.
ಆದರೆ, 12ನೇ ತರಗತಿ ಪರೀಕ್ಷೆಯಲ್ಲಿ ಕಳಪೆ ಪ್ರದರ್ಶನ ತೋರಿರುವ ಹೊರತಾಗಿಯೂ, ಆ ವಿದ್ಯಾರ್ಥಿನಿ ನೀಟ್-ಯುಜಿ ಪರೀಕ್ಷೆಯಲ್ಲಿ 720 ಅಂಕಗಳಿಗೆ ಎದುರಾಗಿ 705 ಅಂಕಗಳನ್ನು ಗಳಿಸಿದ್ದಾಳೆ. ಆ ಮೂಲಕ ಗುಜರಾತ್ ರಾಜ್ಯದ ಅಗ್ರ ಶ್ರೇಯಾಂಕಿತಳಾಗಿ ಹೊರ ಹೊಮ್ಮಿದ್ದಾಳೆ.
ವಿದ್ಯಾರ್ಥಿನಿಯ ನೀಟ್ ಪರೀಕ್ಷಾ ಫಲಿತಾಂಶದಲ್ಲಿ ಆಕೆ ಭೌತಶಾಸ್ತ್ರದಲ್ಲಿ ಶೇ. 99.8, ರಸಾಯನ ಶಾಸ್ತ್ರದಲ್ಲಿ ಶೇ. 99.1 ಹಾಗೂ ಜೀವಶಾಸ್ತ್ರದಲ್ಲಿ ಶೇ. 99.1 ಅಂಕಗಳನ್ನು ಗಳಿಸುವ ಮೂಲಕ ಒಟ್ಟಾರೆಯಾಗಿ ಶೇ. 99.9 ಅಂಕ ಗಳಿಸಿರುವುದು ಕಂಡು ಬಂದಿದೆ.
ವಿಚಿತ್ರವೆಂದರೆ, ನೀಟ್-ಯುಜಿ ಪರೀಕ್ಷೆಯ ಅಂಕಗಳ ಆಧಾರದಲ್ಲಿ ಆಕೆ ಭಾರತದಲ್ಲಿನ ಯಾವುದೇ ವೈದ್ಯಕೀಯ ಕಾಲೇಜಿಗೆ ಪ್ರವೇಶ ಪಡೆಯಬಹುದಾಗಿದ್ದರೂ, ಆಕೆ 12ನೇ ತರಗತಿ ಪರೀಕ್ಷೆಯಲ್ಲಿ ಕನಿಷ್ಟ 50 ಶೇಕಡಾ ಅಂಕ ಪಡೆಯದ ಕಾರಣ ವೈದ್ಯಕೀಯ ಪದವಿ ಪ್ರವೇಶ ಸಾಧ್ಯವಾಗಿಲ್ಲ.