ಗುಜರಾತ್‌ನ ಸಬರ್‌ಕಾಂತ ಜಿಲ್ಲೆಯ ಗ್ರಾಮವೊಂದರಲ್ಲಿ ಸಾಂಪ್ರದಾಯಿಕ ಪೇಟ ತೊಟ್ಟು ತೆಗೆಸಿಕೊಂಡಿದ್ದ ಚಿತ್ರವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿದ್ದ 24 ವರ್ಷ ವಯಸ್ಸಿನ ದಲಿತ ವ್ಯಕ್ತಿ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ವರದಿಯಾಗಿದೆ.
ಜು.17ರಂದು ಘಟನೆ ನಡೆದಿದ್ದು, ಥಳಿತಕ್ಕೊಳಗಾದ ವ್ಯಕ್ತಿಯನ್ನು ಆಟೋರಿಕ್ಷಾ ಚಾಲಕ ಅಜಯ್ ಪಾರ್ಮಾರ್ ಎಂದು ಗುರುತಿಸಲಾಗಿದೆ. ಮನೆಗೆ ತೆರಳುವಾಗ ಸವರ್ಣೀಯ ಜಾತಿಯ ಜನರು ಮನಬಂದಂತೆ ಥಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ದರ್ಬಾರ್ ಸಮುದಾಯದ ಮಂದಿ ಮಾತ್ರ ಸಫಾ ಮತ್ತು ತಂಪು ಕನ್ನಡಕ ಧರಿಸಲು ಯೋಗ್ಯರು. ಹೀಗಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿರುವ ಚಿತ್ರವನ್ನು ತೆಗೆಯಬೇಕು ಎಂದು ಯುವಕನಿಗೆ ತಾಕೀತು ಮಾಡಿದ್ದಾರೆ.
ಈ ಕುರಿತ ಎಫ್‌ಐಆರ್‌ನಲ್ಲಿ ನಾಲ್ವರ ಹೆಸರನ್ನು ಉಲ್ಲೇಖಿಸಲಾಗಿದೆ. ಆರೋಪಿಗಳು ಗ್ರಾಮದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.