ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆ ಹತ್ಯೆ ಬೆನ್ನಲ್ಲಿ ಇರಾನ್ ಕೆಂಡಾಮಂಡಲವಾಗಿದೆ. ಈ ಮಧ್ಯೆ ಭದ್ರತೆಯಲ್ಲಿ ಉಂಟಾದ ಲೋಪಕ್ಕೆ ಸಂಬಂಧಿಸಿದಂತೆ ಗುಪ್ತಚರ ಇಲಾಖೆಯ ಹಿರಿಯ ಅಧಿಕಾರಿಗಳು, ಸೇನಾಧಿಕಾರಿಗಳು ಹಾಗೂ ರಾಜಧಾನಿಯಲ್ಲಿರುವ ಸೇನೆಯ ಅತಿಥಿ ಗೃಹದಲ್ಲಿ ಕೆಲಸ ಮಾಡುವ ಸಿಬ್ಬಂದಿ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಮಂದಿಯನ್ನು ಇರಾನ್‌ನಲ್ಲಿ ಬಂಧಿಸಲಾಗಿದೆ.
ಟೆಹರಾನ್‌ನಲ್ಲಿರುವ ಅತಿಥಿಗೃಹದಲ್ಲಿ ಉಳಿದುಕೊಂಡಿದ್ದ ಹನಿಯೆ ಅವರನ್ನು ಬುಧವಾರ ಹತ್ಯೆ ಮಾಡಲಾಗಿತ್ತು. ಹನಿಯೆ ಅವರು ಹತ್ಯೆಯಾಗುವ ಕೆಲವೇ ಗಂಟೆಗಳ ಮೊದಲು ಇರಾನ್‌ನ ನೂತನ ಅಧ್ಯಕ್ಷರ ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಇರಾನ್ ರಾಷ್ಟ್ರ ರಾಜಧಾನಿಯಲ್ಲಿ ಭಾರಿ ಭದ್ರತೆ ಕಲ್ಪಿಸಲಾಗಿರುವ ಅತಿಥಿಗೃಹದಲ್ಲಿ ನಡೆದಿರುವ ಹತ್ಯೆಯು ಇರಾನ್ ಗೆ ದೊಡ್ಡ ಹೊಡೆತವನ್ನುಂಟುಮಾಡಿದೆ.
ಹನಿಯೆ ಟೆಹರಾನ್‌ಗೆ ಬರುವ ಸುಮಾರು 2 ತಿಂಗಳ ಹಿಂದೆಯೇ ಬಾಂಬ್ ಇರಿಸಲಾಗಿತ್ತು ಎಂಬುದಾಗಿ ಇರಾನ್ ಸೇರಿದಂತೆ ಮಧ್ಯಪ್ರಾಚ್ಯ ರಾಷ್ಟ್ರಗಳ ಅಧಿಕಾರಿಗಳು ಅಂದಾಜಿಸಿದ್ದಾರೆ.
ಹನಿಯೆ ಹತ್ಯೆಗೆ ಇಸ್ರೇಲ್ ಕಾರಣ ಎಂದು ಇರಾನ್ ಹಾಗೂ ಹಮಾಸ್ ಕಿಡಿಕಾರಿವೆ. ಆದರೆ ಈ ಬಗ್ಗೆ ಇಸ್ರೇಲ್ ಪ್ರತಿಕ್ರಿಯೆ ನೀಡಿಲ್ಲ.