ಹಾವೇರಿ: ಮಳೆಗೆ ಮನೆಯ ಮೇಲ್ಫಾವಣಿ ಕುಸಿದು ಅವಳಿ ಮಕ್ಕಳು ಸೇರಿ ಮೂವರು ಮೃತಪಟ್ಟಿರುವ ಘಟನೆ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನಲ್ಲಿ ನಡೆದಿದೆ.
ಮಾದಾಪುರ ಗ್ರಾಮದ ನಿವಾಸಿ ಚೆನ್ನಮ್ಮ (30) ಮತ್ತು ಅವಳಿ ಮಕ್ಕಳಾದ ಅನುಶ್ರೀ(1), ಅಮೂಲ್ಯ (1) ಮೃತ ದುರ್ದೈವಿಗಳು. ಘಟನೆಯಲ್ಲಿ ಮೂವರು ಗಾಯಗೊಂಡಿದ್ದು, ಅವರನ್ನು ಸವಣೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಳೆದ ಎರಡು ದಿನಗಳಿಂದ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ಮುಂಜಾನೆ ಸುಮಾರು 3:30ಕ್ಕೆ ಮನೆಯ ಮೇಲ್ಛಾವಣಿ ಕುಸಿದು ಬಿದ್ದಿದೆ. ಮನೆಯಲ್ಲಿ ಎಲ್ಲರೂ ಮಲಗಿರುವಾಗ ಈ ದುರ್ಘಟನೆ ಸಂಭವಿಸಿದ್ದರಿಂದ ನೆರೆಹೊರೆಯವರು ನೆರವಿಗೆ ಬರಲು ತಡವಾಗಿದೆ. ನೆರೆ ಹೊರೆಯವರಿಂದ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ನಡೆದರೂ ಚಿಕಿತ್ಸೆ ಫಲಕಾರಿಯಾಗದೆ ಮೂವರು ಮೃತಪಟ್ಟಿದ್ದಾರೆ.
ಈ ಕುರಿತು ಹುಲಗೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.