ಅಡ್ಡೂರು ಗ್ರಾಮವನ್ನು ಪಾಕಿಸ್ತಾನಕ್ಕೆ ಹೋಲಿಕೆ ಮಾಡಿದ ಶಾಸಕ ಭರತ್ ಶೆಟ್ಟಿ ವಿರುದ್ಧ ವ್ಯಾಪಕವಾದ ಆಕ್ರೋಶ ವ್ಯಕ್ತವಾಗಿದೆ.
ಅಡ್ಡೂರು ಗ್ರಾಮದಲ್ಲಿ 826 ಮತಗಳು ಭರತ್ ಶೆಟ್ಟಿ ಅವರಿಗೆ ಸಿಕ್ಕಿದೆ. ಹಾಗಾದ್ರೆ ಮಿಸ್ಟರ್ ಭರತ್ ಶೆಟ್ರೇ ನಿಮಗೆ ಮತ ಹಾಕಿ ಗೆಲ್ಲಿಸಿದವರು ಪಾಕಿಸ್ತಾನಿಯರೇ? ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಪ್ರಶ್ನಿಸಿದ್ದಾರೆ.
ಶಾಸಕ ಭರತ್ ಶೆಟ್ಟಿ ಪಾಕಿಸ್ತಾನ ಹೇಳಿಕೆ ಖಂಡಿಸಿ ಪತ್ರಿಕಾ ಹೇಳಿಕೆ ನೀಡಿರುವ ಇನಾಯತ್ ಆಲಿ ಕರಡಿಗೆ ಗೊತ್ತಿರೋದು ನಾಲ್ಕೇ ಹಾಡು ಎಲ್ಲ ಜೇನುತುಪ್ಪದ ಬಗ್ಗೆ ಅನ್ನುವಂತೆ ಬಿಜೆಪಿಯವರಿಗೆ ಪಾಕಿಸ್ತಾನ ಜಪ ಮಾಡುವುದನ್ನು ಬಿಟ್ಟು ಬೇರೆ ಏನೂ ಮಾಡಲ್ಲ. ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕ ಭರತ್ ಶೆಟ್ಟಿ, ಅಡ್ಡೂರನ್ನು ಮಿನಿ ಪಾಕಿಸ್ತಾನ ಎಂದಿರುವುದು ಅವರ ಸ್ಥಾನಕ್ಕೆ ಶೋಭೆ ತರುವುದಿಲ್ಲ ಎಂದು ಹೇಳಿದ್ದಾರೆ.
ಭರತ್ ಶೆಟ್ಟಿ ಅವರೇ, ನೀವು ಶಾಸಕರಾಗಲು ಅಯೋಗ್ಯರು ಎನ್ನುವುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದೀರಿ. ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಲು ವಿಫಲರಾಗಿರುವ ಭರತ್ ಶೆಟ್ಟಿ ಅವರು ಸುಲಭದಲ್ಲಿ ಪ್ರಚಾರ ಪಡೆದುಕೊಳ್ಳಲು ಕೀಳು ಮಟ್ಟದ ಮನಸ್ಥಿತಿಯ ಮೊರೆ ಹೋಗಿರುವುದು ದುರಂತ. ನಿತ್ಯ ನಿರಂತರವಾಗಿ ಕೋಮುಪ್ರಚೋದಕ ಭಾವನಾತ್ಮಕ ವಿಷಯಗಳನ್ನು ಮಾತನಾಡುವುದು, ನಿಂದಿಸಿ ಕೆಣಕಿ ಉದ್ರಿಕ್ತ ಪರಿಸ್ಥಿತಿ ನಿರ್ಮಾಣ ಮಾಡಿ ಸಮಾಜದ ಸ್ವಾಸ್ಥ್ಯ ಕೆಡಿಸುವುದೇ ಭರತ್ ಶೆಟ್ಟಿಯವರ ಚಾಳಿಯಾಗಿದೆ. ಅವರ ಪಕ್ಷದೊಳಗಿನ ಭಿನ್ನಮತದ ಕೋಪವನ್ನು ಸಾರ್ವಜನಿಕವಾಗಿ ತೋರಿಸುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.
ಒಂದು ಆರೋಗ್ಯ ಕೇಂದ್ರ ಮಾಡಲಾಗದ ಇವರೆಂತಹ ವೈದ್ಯರು ಎಂದು ಪ್ರಶ್ನಿಸಿದ್ದಾರೆ.
ಮಂಗಳೂರು ಉತ್ತರ ಕ್ಷೇತ್ರದಲ್ಲಿ ಅಕ್ರಮ ಮರಳುಗಾರಿಕೆ, ಅಕ್ರಮ ಕಲ್ಲು ಗಣಿಗಾರಿಕೆಯನ್ನು ಮೊದಲು ನಿಮ್ಮ ಪರಮಾಪ್ತರು ನಡೆಸುವುದನ್ನು ನಿಲ್ಲಿಸಿ ನಿಮ್ಮ ಧಮ್ಮು, ತಾಕತ್ತು ತೋರಿಸಿ ಇನಾಯತ್ ಅಲಿ ಸವಾಲು ಹಾಕಿದ್ದಾರೆ.