Breaking:

ಕಡಪ್ಪರ ಸಮೀರ್ ಕೊಲೆ ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ, ಸಮೀರ್ ಪತ್ನಿ ನೀಡಿದ ದೂರಿನಲ್ಲಿ ಏನೇನಿದೆ ಗೊತ್ತಾ?

ಮಂಗಳೂರು: ರೌಡಿ ಶೀಟರ್ ಕಡಪ್ಪರ ಸಮೀರ್ (33)ನನ್ನು ದುಷ್ಕರ್ಮಿಗಳ ತಂಡವೊಂದು ಕಲ್ಲಾಪು ಬಳಿ ಮಾರಕಾಯುಧಗಳಿಂದ ಕೊಚ್ಚಿ ಕೊಲೆಗೈದಿತ್ತು.

ಟಾರ್ಗೆಟ್ ಇಲ್ಯಾಸ್ ಕೊಲೆ ಪ್ರಕರಣದ ಆರೋಪಿಯಾಗಿದ್ದ ಸಮೀರ್ ಕೊಲೆ ಪ್ರಕರಣದ ಆರೋಪಿಗಳ ಪತ್ತೆಗಾಗಿ ಇದೀಗ ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಪೊಲೀಸರು ಮಾಹಿತಿಯನ್ನು ನೀಡಿದ್ದಾರೆ.

ರೌಡಿ ಶೀಟರ್ ಆಗಿರುವ ಸಮೀರ್ ವಿರುದ್ಧ ಉಳ್ಳಾಲ ಸಹಿತ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ 9 ಪ್ರಕರಣಗಳು ದಾಖಲಾಗಿವೆ. ದರೋಡೆ ಪ್ರಕರಣವೊಂದರಲ್ಲಿ ಸಮೀರ್ ಇತ್ತೀಚೆಗೆ ಜೈಲು ಪಾಲಾಗಿದ್ದ. ಜು.1ರಂದು ಮಂಗಳೂರಿನ ಜೈಲಿನಲ್ಲಿ ನಡೆದ ಹಲ್ಲೆ ಪ್ರಕರಣದಲ್ಲಿ ಸಮೀರ್ ವಿರುದ್ಧ ಕೇಸು ದಾಖಲಾಗಿತ್ತು. ಕೆಲವು ದಿನಗಳ ಹಿಂದೆ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆ ಹೊಂದಿದ್ದ. 2018ರಲ್ಲಿ ಟಾರ್ಗೆಟ್ ಇಲ್ಯಾಸ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಈತನನ್ನು 2023ರಲ್ಲಿ ನ್ಯಾಯಾಲಯ ಖುಲಾಸೆಗೊಳಿಸಿತ್ತು.

ಸಮೀರ್ ಪತ್ನಿ ನೀಡಿದ ದೂರಿನಲ್ಲೇನಿದೆ?

ರವಿವಾರ ರಾತ್ರಿ  9:30ಕ್ಕೆ ನಾನು ಪತಿ ಸಮೀರ್, ಅತ್ತೆ ಜಮೀಲಾ ಮತ್ತು ಇತರ ಇಬ್ಬರು ಮಕ್ಕಳ ಜೊತೆ ಕಾರಿನಲ್ಲಿ ಮುಕ್ಕಚೇರಿಯ ಮನೆಯಿಂದ ಗೋರಿಗುಡ್ಡದಲ್ಲಿರುವ ಸಮೀರ್‌ನ ಸಹೋದರನ ಮನೆಗೆ ತೆರಳುತ್ತಿದ್ದಾಗ ತೊಕ್ಕೊಟ್ಟು ಜಂಕ್ಷನ್ ಬಳಿ ತಲುಪಿದೆವು. ಅಷ್ಟರಲ್ಲಿ ಸಮೀರ್‌ಗೆ ಯಾರೋ ಒಬ್ಬರು ಫೋನ್ ಮಾಡಿ ಕಲ್ಲಾಪುವಿನ ರೆಸ್ಟೋರೆಂಟ್ ಬಳಿ ಬರುವಂತೆ ಹೇಳಿದ್ದಾರೆ. ಅದರಂತೆ ರಾತ್ರಿ 10ಕ್ಕೆ ರೆಸ್ಟೋರೆಂಟ್ ಬಳಿ ಕಾರನ್ನು ನಿಲ್ಲಿಸಿದ ಸಮೀರ್ ನಡೆದುಕೊಂಡು ಕಾರಿನ ಹಿಂದಕ್ಕೆ ಹೋಗುತ್ತಿದ್ದಾಗ ಇನ್ನೊಂದು ಕಾರಿನಲ್ಲಿದ್ದ 5 ಮಂದಿ ಇಳಿದು ಸಮೀರ್‌ಗೆ ಅವಾಚ್ಯ ಶಬ್ದದಿಂದ ಬೈದಿದ್ದಾರೆ. ಈ ಪೈಕಿ ನೌಶಾದ್ ಮತ್ತಿತರ ನಾಲ್ಕು ಮಂದಿ ತಲವಾರುಗಳನ್ನು ಹಿಡಿದುಕೊಂಡು ಕಡಿಯಲು ಬಂದಾಗ ಸಮೀರ್ ತಪ್ಪಿಸಿದ್ದಾರೆ. ಆವಾಗ ಇನ್ನೊಬ್ಬ ಆರೋಪಿ ಅಡ್ಡಬಂದು ತಡೆದಿದ್ದು, ಅವನಿಂದಲೂ ತಪ್ಪಿಸಿಕೊಂಡು ಸಮೀರ್ ಓಡಿ ಪರಾರಿಯಾಗುವಾಗ ಆರೋಪಿಗಳು ಬೆನ್ನಟ್ಟಿಕೊಂಡು ತಲವಾರುಗಳಿಂದ ಕಡಿದು ಕೊಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಕುರಿತು ಸಮೀರ್‌ ಪತ್ನಿ ಸುಮಯ್ಯ ನೀಡಿರುವ ದೂರಿನಂತೆ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share this article

ಟಾಪ್ ನ್ಯೂಸ್