Breaking:

ಕನ್ವರ್‌ ಯಾತ್ರಿಗಳು ಸಾಗುವ ದಾರಿಯಲ್ಲಿದ್ದ ಮಸೀದಿಗಳನ್ನು ಬಿಳಿ ಪರದೆ ಮೂಲಕ ಮುಚ್ಚಿದ ಅಧಿಕಾರಿಗಳು: ಹಿಂದೆ ಎಂದೂ ಈ ರೀತಿ ನಡೆದಿರಲಿಲ್ಲ ಎಂದ ಮಸೀದಿ ಆಡಳಿತ

ಕನ್ವರ್‌ ಯಾತ್ರಿಗಳು ಸಾಗುವ ದಾರಿಯಲ್ಲಿರುವ ಮಸೀದಿಗಳು, ದರ್ಗಾಗಳು ಕಾಣದಂತೆ ಬಿಳಿ ಪರದೆ ಮುಚ್ಚಿರುವ ಘಟನೆ ಉತ್ತರಾಖಂಡದ ಹರಿದ್ವಾರದಲ್ಲಿ ನಡೆದಿದೆ.

ಕನ್ವರ್ ಯಾತ್ರೆಯ ಮಾರ್ಗದಲ್ಲಿ ಹರಿದ್ವಾರದಲ್ಲಿ ಎರಡು ಮಸೀದಿಗಳು ಮತ್ತು ಮಜಾರ್ ಗೆ ಶುಕ್ರವಾರ ಬೆಳಿಗ್ಗೆ ದೊಡ್ಡ ಬಿಳಿ ಪರದೆಗಳನ್ನು ಬಳಸಿ ಮರೆಮಾಡಲಾಗಿದೆ. ಸಂಜೆಯ ವೇಳೆಗೆ ಜಿಲ್ಲಾಡಳಿತ ಪರದೆಗಳನ್ನು ತೆಗೆದಿದ್ದಾರೆ.

ಪರದೆ ಹಾಕಲು ನಾವು ಯಾವುದೇ ಆದೇಶವನ್ನು ನೀಡಿಲ್ಲ ಎಂದು ಜಿಲ್ಲಾ  ಆಡಳಿತವು ಹೇಳಿಕೊಂಡರೆ, ಹರಿದ್ವಾರ ಜಿಲ್ಲಾ ಉಸ್ತುವಾರಿ ಸಚಿವ ಸತ್ಪಾಲ್ ಮಹಾರಾಜ್ ಯಾವುದೇ ಗಲಾಟೆ ಅಥವಾ ಅಶಾಂತಿಯನ್ನು ತಡೆಗಟ್ಟಲು ಮತ್ತು ಕನ್ವರ್ ಯಾತ್ರೆಯ ಸುಗಮ ಪ್ರಗತಿಯನ್ನು ಖಚಿತಪಡಿಸಿಕೊಳ್ಳಲು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಈ ವಿವಾದ ತೀವ್ರ ಸ್ವರೂಪಕ್ಕೆ ತಿರುಗಿದ್ದರಿಂದ ಮುಚ್ಚಿರುವ ಪರದೆಗಳನ್ನು ತೆಗೆದು ಹಾಕಲಾಗಿದೆ.

ಈ ಕುರಿತು ಮಾತನಾಡಿದ ಮಸೀದಿಗಳ ಮುಖ್ಯಸ್ಥರು, ಕಳೆದ 40 ವರ್ಷಗಳಲ್ಲಿ ಈ ರೀತಿ ಯಾವತ್ತೂ ನಡೆದಿರಲಿಲ್ಲ ಎಂದು ಹೇಳಿದ್ದಾರೆ.

ಈ ಮಧ್ಯೆ ಕನ್ವರ್‌ ಯಾತ್ರೆಯ ಮಾರ್ಗದಲ್ಲಿರುವ ಅಂಗಡಿಗಳ ಮಾಲಕರ ಹೆಸರು ಪ್ರದರ್ಶನಕ್ಕೆ ನೀಡಲಾಗಿರುವ ಮಧ್ಯಂತರ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್‌ ಮತ್ತೆ ವಿಸ್ತರಣೆ ಮಾಡಿದೆ.

Share this article

ಟಾಪ್ ನ್ಯೂಸ್