ಕೊಡಗು: ಮಳೆಯಿಂದ ಹಾನಿಗೊಳಗಾಗಿರುವ ಪ್ರದೇಶಗಳಿಗೆ ಭೇಟಿ ನೀಡಿದ್ದ ಸಚಿವ ಬೋಸರಾಜು ಅವರನ್ನು ಸಂತ್ರಸ್ತ ಜನರು ತರಾಟೆಗೆ ತೆಗೆದುಕೊಂಡ ಘಟನೆ ಸೋಮವಾರಪೇಟೆ ತಾಲ್ಲೂಕಿನಲ್ಲಿ ನಡೆದಿದೆ.
ಸೋಮವಾರಪೇಟೆ ಜಂಬೂರಿಗೆ ಸಚಿವ ಬೋಸರಾಜು ಹಾಗೂ ಮಡಿಕೇರಿ ಕ್ಷೇತ್ರದ ಶಾಸಕ ಮಂಥರ್ ಗೌಡ ಭೇಟಿ ನೀಡಿದ್ದರು.
ಮಳೆಯಿಂದ ಹಾನಿಗೊಳಗಾಗಿರುವ ಸ್ಥಳಗಳಿಗೆ ತೆರಳಿ ವೀಕ್ಷಣೆ ಮಾಡಿದ್ದರು. ಈ ವೇಳೆ ಸಚಿವರಿಗೆ ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದು, 2018 ರಲ್ಲಿ ಮಹಾ ಮಳೆಯಿಂದ ಆಸ್ತಿಪಾಸ್ತಿ, ಮನೆಗಳನ್ನು ಕಳೆದುಕೊಂಡ ನಮಗೆ ಸರ್ಕಾರ ಮನೆ ನೀಡಿದೆ. ಅದರೆ ಯಾವುದೇ ರೀತಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಕೊಡಲಿಲ್ಲ. ಹಲವಾರು ಬಾರಿ ಶಾಸಕರು, ಜಿಲ್ಲಾಧಿಕಾರಿಗಳಿಗೆ ಸಮಸ್ಯೆಯ ಬಗ್ಗೆ ಮನವರಿಕೆ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಿದ್ದಾರೆ.
ನಮಗೆ ಕುಡಿಯಲು ಸರಿಯಾಗಿ ನೀರಿಲ್ಲ. ವಿದ್ಯುತ್ ಸರಿಯಾಗಿ ಪೂರೈಕೆ ಇಲ್ಲ. ಚರಂಡಿ ವ್ಯವಸ್ಥೆಗಳಿಲ್ಲ. ಶಾಸಕರಿಗೆ, ಜಿಲ್ಲಾಧಿಕಾರಿ ಹೇಳಿದರೂ ಪ್ರಯೋಜನವಾಗಿಲ್ಲ. ನಮ್ಮ ಸಮಸ್ಯೆ ಯಾರು ಬಗೆಹರಿಸುತ್ತಿಲ್ಲವೆಂದು ಸಚಿವರ ಮುಂದೆ ನೂರಾರು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.