ಕೋಲ್ಕತಾ ಆರ್ ಜಿ ಕಾರ್ ಆಸ್ಪತ್ರೆಯಲ್ಲಿ ಪಿಜಿ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಭಾರೀ ಸದ್ದು ಮಾಡಿತ್ತು, ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಇದೀಗ ತನಿಖೆಯ ವೇಳೆ ಹಲವು ಮಹತ್ವದ ಅಂಶಗಳು ಬಯಲಾಗಿದೆ.
ಅಪರಾಧ ಮಾಡಿದ ನಂತರ, ಆರೋಪಿ ತಾನು ಉಳಿದುಕೊಂಡಿದ್ದ ಸ್ಥಳಕ್ಕೆ ಹಿಂತಿರುಗಿ ಶುಕ್ರವಾರ ತಡರಾತ್ರಿಯವರೆಗೆ ಮಲಗಿದ್ದನು. ಎಚ್ಚರವಾದ ನಂತರ, ಅವನು ಮತ್ತೆ ಬಟ್ಟೆ ತೊಳೆದಿದ್ದಾನೆ ಎಂದು ಪೋಲಿಸರು ತನಿಖೆಯ ವೇಳೆ ಕಂಡು ಕೊಂಡಿದ್ದಾರೆ.
ಘಟನೆ ನಡೆದ ಬಳಿಕ ಭಾರೀ ಆಕ್ರೋಶ ಭುಗಿಲೆದ್ದಿದ್ದವು. ಆರೋಪಿ ಸಂಜಯ್ ರಾಯ್‌ನನ್ನು ಪ್ರಮುಖ ಸಾಕ್ಷ್ಯಾಧಾರದ ಆಧಾರದ ಮೇಲೆ ಕೆಲವೇ ಗಂಟೆಗಳಲ್ಲಿ ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಈ ಪ್ರಕರಣವನ್ನು ಬ್ಲೂಟೂತ್ ಹೆಡ್‌ಫೋನ್ ಸಾಕ್ಷ್ಯದ ಮೂಲಕ ಭೇದಿಸಿದ್ದು, ಆರೋಪಿ ತನ್ನ ಬ್ಲೂಟೂತ್‌ಅನ್ನು ಕೃತ್ಯ ಎಸಗಿದ ಸ್ಥಳದಲ್ಲೇ ಬಿಟ್ಟು ಹೋಗಿದ್ದ.
ಶುಕ್ರವಾರ ಬೆಳಿಗ್ಗೆ, ಕೋಲ್ಕತ್ತಾದ ಸರ್ಕಾರಿ ಆರ್‌ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಮಹಿಳಾ ಸ್ನಾತಕೋತ್ತರ ತರಬೇತಿ ಯುವ ವೈದ್ಯೆಯ ಅರೆ ನಗ್ನ ಶವ ಪತ್ತೆಯಾಗಿತ್ತು. ಇದರ ಬೆನ್ನಲ್ಲಿ ವ್ಯಾಪಕವಾದ ಆಕ್ರೋಶ ಭುಗಿಲೆದ್ದಿತ್ತು.