ಕುಂದಾಪುರ: ಬೆಳ್ಳಂಬೆಳಗ್ಗೆ ಎರಡು ಕಾರುಗಳಲ್ಲಿ ಪೊಲೀಸ್ ಹಾಗೂ ಅಧಿಕಾರಿಗಳ ಸೋಗಿನಲ್ಲಿ ಮಣೂರಿನ ಉದ್ಯಮಿಯೊಬ್ಬರ ಮನೆಗೆ ಅಪರಿಚಿತರ ತಂಡವೊಂದು ಬಂಧಿರುವ ಬಗ್ಗೆ ವರದಿಯಾಗಿದೆ.
ಮನೆ ಮಾಲಕಿ ಮಣೂರು ಗ್ರಾಮದ ಕವಿತಾ (34) ಈ ಕುರಿತು ಕೋಟ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಜು.25ರಂದು ಬೆಳಗ್ಗೆ 8.30 ಗಂಟೆಗೆ ಮನೆಯ ಹೊರಗಿನಿಂದ ಯಾರೋ ಬಾಗಿಲು ಬಡಿದ ಶಬ್ದವಾಗಿತ್ತು. ಆಗ ನಿರ್ಲಕ್ಷಿಸಿದ್ದು, 9 ಗಂಟೆಗೆ ಹೊರಗೆ ಬಂದು ನೋಡಿದಾಗ ಯಾರೂ ಇರಲಿಲ್ಲ. ಈ ನಡುವೆ ಮನೆಯ ಸಿಸಿಟಿವಿ ಮೇಲೆ ನಿಗಾ ಇಡುತ್ತಿರುವ ಕುಂದಾಪುರದ ಸೈನ್ ಇನ್ ಸೆಕ್ಯುರಿಟಿ ಸಂಸ್ಥೆಯ ಕೃಷ್ಣ ಅವರು ಕರೆ ಮಾಡಿ, ನಿಮ್ಮ ಮನೆಗೆ ಸ್ವಿಫ್ಟ್ ಮತ್ತು ಇನೋವಾ ಕಾರಿನಲ್ಲಿ 6-8 ಜನ ಮಂದಿ ಆಗಮಿಸಿ ಗೇಟು ತೆರೆಯಲು ಯತ್ನಿಸಿದ್ದರು. ಸಾಧ್ಯವಾಗದಿದ್ದಾಗ ಕಾಂಪೌಂಡ್ ಹಾರಿ ಮನೆಗೆ ಬಂದು ಬಾಗಿಲು ಹಾಗೂ ಕಿಟಕಿಯನ್ನು ಬಲಾತ್ಕಾರವಾಗಿ ತೆಗೆಯಲು ಪ್ರಯತ್ನಿಸಿರುವುದಾಗಿ ತಿಳಿಸಿದ್ದಾರೆ.
ಅಪರಿಚಿತರು ಮನೆಗೆ ಅಕ್ರಮವಾಗಿ ಪ್ರವೇಶ ಮಾಡಿ, ಮನೆಯ ಬಾಗಿಲು ತೆರೆಯಲು ಯತ್ನಿಸಿ, ಗೇಟಿಗೆ ಹಾನಿ ಮಾಡಿ ವಾಪಸ್ ಹೋಗಿರುವುದಾಗಿ ತಿಳಿಸಿದ್ದಾರೆ.
ಒಂದು ಕಾರಿನಲ್ಲಿ ಅಧಿಕಾರಿಗಳ ಸೋಗಿನಲ್ಲಿ ಸಫಾರಿ ಧರಿಸಿದ್ದ ಒಬ್ಬ ಹಾಗೂ ಇತರ ನಾಲ್ವರು, ಮತ್ತೊಂದು ಕಾರಿನಲ್ಲಿ ಪೊಲೀಸ್ ಸಮವಸ್ತ್ರದಲ್ಲಿದ್ದ ಒಬ್ಬ ಹಾಗೂ ಇತರರು ಸೇರಿ ಒಟ್ಟು 8 ಮಂದಿ ಇದ್ದರು ಎಂದು ಶಂಕಿಸಲಾಗಿದೆ. ಇನ್ನು ತಂಡದಲ್ಲಿ 6 ಜನ ಇರುವುದು ಸಿಸಿಟಿಯಲ್ಲಿ ಸೆರೆಯಾಗಿದೆ.
ಮಳೆಹನಿಯುತ್ತಿದ್ದಾಗ ಕಾರಿನಿಂದ ಇಳಿದ ತಂಡ ಗೇಟು ತೆರೆಯಲು ಯತ್ನಿಸಿದೆ. ಸಾಧ್ಯವಾಗದಿದ್ದಾಗ ಗೇಟಿಗೆ ಗುದ್ದಿ ಸದ್ದು ಮಾಡಿದೆ. ಆ ಬಳಿಕ ಇನ್ನೊಂದು ಮಗ್ಗುಲಿನಿಂದ ಹೋಗಿ ಕಾಂಪೌಂಡ್ನಿಂದ ಬಾವಿಕಟ್ಟೆಗೆ ಇಳಿದು ಅಂಗಳಕ್ಕೆ ಹೋಗಿ ಮುಖ್ಯ ಬಾಗಿಲ ಬಳಿ ಹೋಗಿದೆ. ಆಗಲೂ ಬಾಗಿಲು ತೆರೆಯದಿದ್ದಾಗ ತಂಡ ವಾಪಾಸ್ಸಾಗಿದೆ ಎಂದು ತಿಳಿದು ಬಂದಿದೆ.