ಕುಂದಾಪುರ; ಖಾಸಗಿ ಬಸ್ ಗೆ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದ ಘಟನೆ ತಲ್ಲೂರು ಪ್ರವಾಸಿ ಬಳಿ ನಡೆದಿದ್ದು, ಓರ್ವ ವಿದ್ಯಾರ್ಥಿ ಗಾಯಗೊಂಡ ಘಟನೆ ಕುಂದಾಪುರದಲ್ಲಿ ನಡೆದಿದೆ.
ಅಪಘಾತದ ಪರಿಣಾಮ ವೆಂಕಟರಮಣ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿ ಪ್ರಸಾದ್ ಎಂಬಾತ ಗಂಭೀರ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಇನ್ನು ಅದೇ ಶಾಲೆಯ ವಿದ್ಯಾರ್ಥಿಗಳಾದ ಶ್ರೇಯಸ್ ಪೂಜಾರಿ, ದೀಪಶ್ರೀ, ತನುಷ್, ಪ್ರೀತಮ್, ಕೋಟ ಆಶ್ರಿತಾ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿಯರಾದ ಅಶ್ಮಿತಾ ಹಾಗೂ ಅಶ್ವಿನಿ, ಇತರ ಪ್ರಯಾಣಿಕರಾದ ಶಿವರಾಂ, ವಿದ್ಯಾ, ಸತೀಶ್, ದೀಪ ಹಾಗೂ ಸುಕ್ರ ಎಂಬುವರು ಸಣ್ಣ ಪುಟ್ಟ ಗಾಯಗಳಾಗಿದ್ದು ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಎ.ಕೆ.ಎಂ.ಎಸ್ ಬಸ್ಸಿನ ಚಾಲಕ ತಲ್ಲೂರು ಸಮೀಪದ ಪ್ರವಾಸಿ ಪೆಟ್ರೋಲ್ ಬಂಕ್ ಎದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪ್ರಯಾಣಿಕರೊಬ್ಬರನ್ನು ಹತ್ತಿಸಿಕೊಳ್ಳಲು ಬಸ್ ನಿಲ್ಲಿಸಿದ್ದಾನೆ. ಪ್ರಯಾಣಿಕ ಬಸ್ಸೇರಿದ ಕೂಡಲೇ ಯಾವುದೇ ಮುನ್ಸೂಚನೆ ನೀಡದೆ ಬಸ್ಸನ್ನು ಚಲಾಯಿಸಿದ್ದಾನೆ. ಇದೇ ಸಂದರ್ಭ ಹಿಂದುಗಡೆಯಿಂದ ಸರಕು ತುಂಬಿಸಿಕೊಂಡು ಬರುತ್ತಿದ್ದ ಲಾರಿ ಚಾಲಕ ಬ್ರೇಕ್ ಹಾಕಿದ್ದರೂ ಫಲ ನೀಡದೆ ಬಸ್ಸಿನ ಹಿಂಭಾಗಕ್ಕೆ ಡಿಕ್ಕಿಹೊಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಈ ಕುರಿತು ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.