ಕುಂದಾಪುರದಲ್ಲಿ; ಪತ್ನಿಯನ್ನು ಕೂಡಿಹಾಕಿ ಕತ್ತಿಯಿಂದ ಕಡಿದು ಕೊಲೆಗೆ ಯತ್ನಿಸಿದ ಆರೋಪಿಯನ್ನು ಪೊಲೀಸರು ಸಾಹಸಸಿಯವಾಗಿ ಬಂಧಿಸಿದ ಘಟನೆ ಬಸ್ರೂರಿನಲ್ಲಿ ನಡೆದಿದೆ.
ಲಕ್ಷ್ಮಣ (38) ಬಂಧಿತ ಆರೋಪಿ. ಪತ್ನಿ ಮೇಲೆ ಕತ್ತಿಯಿಂದ ಹಲ್ಲೆ ಮಾಡಿ ಬಳಿಕ ಆರೋಪಿಯು ಮನೆಯ ಒಳಗಿನಿಂದ ಬಾಗಿಲನ್ನು ಹಾಕಿ ಕೊಠಡಿಗೆ ಯಾರೂ ಪ್ರವೇಶಿಸದಂತೆ ಕೂಡಿ ಹಾಕಿ ಬೆದರಿಸಿದ್ದಾನೆ. ಪೊಲೀಸರು ಬಂದು ಆತನನ್ನು ವಶಕ್ಕೆ ಪಡೆಯಲು ಹರಸಾಹಸಪಟ್ಟಿದ್ದಾರೆ.
ಆರೋಪಿಯು ಕೈಯಲ್ಲಿ ಕತ್ತಿ ಹಿಡಿದು ಹೆದರಿಸುತ್ತಿದ್ದುದರಿಂದ ಎದುರಿನ ಬಾಗಿಲು ಮುರಿದು ಒಳಗೆ ಹೋಗಲು ಸಾಧ್ಯವಾಗಲಿಲ್ಲ. ಬಳಿಕ ಪೊಲೀಸರು ಆತನಿದ್ದ ರೂಮಿನ ಕಿಟಕಿ ಮೂಲಕ ಖಾರದ ಪುಡಿ ಎರಚಿದ್ದು, ಅದರಿಂದ ಆತ ತಪ್ಪಿಸಿಕೊಂಡಿದ್ದಾನೆ. ಬಳಿಕ ಏರ್‌ಗನ್ ಮೂಲಕ ಗ್ಯಾಸ್ ಸಿಂಪಡಿಸಿದ್ದು, ಅದರಿಂದಲೂ ತಪ್ಪಿಸಿಕೊಂಡಿದ್ದಾನೆ.
ಬಳಿಕ ಪೊಲೀಸರು ಮತ್ತು ಅಗ್ನಿಶಾಮಕದಳದವರು ಎದುರಿನ ಬಾಗಿಲನ್ನು ಒಡೆಯಲು ಪ್ರಯತ್ನಿಸುತ್ತಿರುವಂತೆ ಮಾಡಿ, ಮತ್ತೊಂದು ತಂಡ ಕಿಟಕಿ ಮೂಲಕ ಮನೆ ಒಳಗೆ ಪ್ರವೇಶಿಸಿ ಮಹಿಳೆಯನ್ನು ರಕ್ಷಿಸಿದ್ದಾರೆ. ಬಳಿಕ ಆರೋಪಿಯನ್ನು ಬಂಧಿಸಲಾಗಿದೆ.
ಬಳಿಕ ಗಾಯ ಗೊಂಡಿದ್ದ ಅನಿತಾ (32) ಅವರನ್ನು ಕುಂದಾಪುರದ ಆಸ್ಪತ್ರೆಗೆ ದಾಖಲಿಸಲಾಯಿತು.