2ನೇ ತರಗತಿ ವಿದ್ಯಾರ್ಥಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ದುರಂತ ಘಟನೆ
ಉತ್ತರ ಪ್ರದೇಶದ ಬಲರಾಂಪುರ ಜಿಲ್ಲೆಯ ತುಳಸಿಪುರ ಪೊಲೀಸ್ ಠಾಣೆ ವ್ಯಾಪ್ತಿಯ ಮದರಸಾದಲ್ಲಿ ನಡೆದಿದೆ.
ಬಲರಾಂಪುರ ಜಿಲ್ಲೆಯಿಂದ 30 ಕಿಲೋಮೀಟರ್ ದೂರದಲ್ಲಿರುವ ತುಳಸಿಪುರ ಇಟ್ವಾ ರಸ್ತೆಯಲ್ಲಿರುವ ಜಾಮಿಯಾ ನೈಮಿಯಾನ್ ಇರ್ವಿಯಲ್ಲಿ ಘಟನೆ ನಡೆದಿದೆ.
ಪೊಲೀಸರು ಭಾನುವಾರ ಕೊಲೆ ಪ್ರಕರಣವನ್ನು ಬಹಿರಂಗಪಡಿಸಿದ್ದಾರೆ ಮತ್ತು ಘಟನೆಗೆ ಸಂಬಂಧಿಸಿ 12 ವರ್ಷದ ಮದ್ರಸಾ ವಿದ್ಯಾರ್ಥಿಯನ್ನು ಬಂಧಿಸಿದ್ದಾರೆ.
ಹತ್ಯೆಗೆ ಬಳಸಲಾದ ಚಾಕುವನ್ನು ಉತ್ತರದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಯೋಗೇಶ್ ಕುಮಾರ್ ಅವರು ವಶಪಡಿಸಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಇಬ್ಬರೂ ಮದರಸಾದಲ್ಲಿ ಒಂದೇ ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದರು. ವಿಚಾರಣೆ ವೇಳೆ ಅಪ್ರಾಪ್ತ ಆರೋಪಿಯು ಮೃತ ವಿದ್ಯಾರ್ಥಿಯೊಂದಿಗೆ ಜಗಳವಾಡಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾನೆ. ಈ ವೇಳೆ ಇಬ್ಬರೂ ಪರಸ್ಪರ ಬೈದಾಡಿಕೊಂಡಿದ್ದರು. ಹೀಗಾಗಿ ಆರೋಪಿ ವಿದ್ಯಾರ್ಥಿಯನ್ನು ಹತ್ಯೆ ಮಾಡಲು ಯೋಜಿಸಿದ್ದ ಎಂದು ಹೆಚ್ಚುವರಿ ಎಸ್ಪಿ ಯೋಗೇಶ್ ಕುಮಾರ್ ತಿಳಿಸಿದ್ದಾರೆ.
ಘಟನೆ ನಡೆಯುವ ಕೆಲ ದಿನಗಳ ಹಿಂದೆ ಆರೋಪಿ ಮಾರುಕಟ್ಟೆಯಿಂದ ಚಾಕು ಖರೀದಿಸಿ ಸೂಟ್‌ಕೇಸ್‌ನಲ್ಲಿ ಬಚ್ಚಿಟ್ಟಿದ್ದ. ಘಟನೆಗೆ ಬಳಸಿದ್ದ ಚಾಕು ಕೂಡ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕನ ಮೃತದೇಹ ಸಿಕ್ಕ ಬಳಿಕ ಹಲವರನ್ನು ವಿಚಾರಣೆ ನಡೆಸಲಾಗಿತ್ತು. ಇದೀಗ ಹೆಚ್ಚಿನ ವಿಚಾರಣೆ ಬಳಿಕ ನೈಜ ಆರೋಪಿಯನ್ನು ಪತ್ತೆ ಹಚ್ಚಲಾಗಿದೆ.