ಪೊಲೀಸ್ ಠಾಣೆಯಲ್ಲಿ ಬೆಂಚ್ ಮೇಲೆ ಕುಳಿತಿದ್ದ ಮಹಿಳೆ ಮೇಲೆ ಬಿಜೆಪಿ ನಾಯಕನೋರ್ವ ಹಲ್ಲೆ ನಡೆಸುವ ವಿಡಿಯೋ ವೈರಲ್ ಆಗಿದ್ದು, ಈ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಮಹಾರಾಷ್ಟ್ರದ ಬುಲ್ದಾನದ ನಗರ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ. ಪೊಲೀಸ್ ಠಾಣೆಯಲ್ಲಿ ಕುಳಿತಿದ್ದ, ಉತ್ತರ ಪ್ರದೇಶ ಮೂಲದ ಮಹಿಳೆ ಮೇಲೆ ಬಿಜೆಪಿ ನಾಯಕ ಶಿವ ತಾಯ್ಡೆ ಹಲ್ಲೆ ನಡೆಸಿದ್ದಾರೆ.
ಈ ಕುರಿತ ವಿಡಿಯೋ ವೈರಲ್ ಆಗುತ್ತಿದ್ದಂತೆ ಮಲ್ಕಪುರ ಕೃಷಿ ಸಮಿತಿಯ ಚೇರ್‌ಮ್ಯಾನ್ ಆಗಿರುವ ಶಿವ ತಾಯ್ಡೆ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಶಿವಸೇನೆ ಹಾಗೂ ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದಾರೆ
ಮಹಿಳೆ ಜೊತೆಯಲ್ಲಿದ್ದ ವ್ಯಕ್ತಿಯನ್ನು ಆಕೆಯ ಪತಿ ಎಂದು ಹೇಳಲಾಗಿದೆ. ಆದರೆ ದಂಪತಿ ಪೊಲೀಸ್ ಠಾಣೆಗೆ ಯಾವ ಕಾರಣಕ್ಕೆ ಬಂದಿದ್ದರು? ಶಿವ ತಾಯ್ಡೆ ಮತ್ತು ದಂಪತಿಗೂ ಏನು ಸಂಬಂಧ ಎಂದು ಸ್ಪಷ್ಟವಾಗಿ ತಿಳಿದು ಬಂದಿಲ್ಲ.
ಹಲ್ಲೆಯ ವಿಡಿಯೋ ವೈರಲ್ ಆಗಿದ್ದು, ಗೃಹ ಸಚಿವ ದೇವೇಂದ್ರ ಫಡ್ನವೀಸ್ ಅವರನ್ನು ಪ್ರಶ್ನಿಸಿ ಶಿವಸೇನೆ ನಾಯಕಿ ಸುಷ್ಮಾ ಅಂಧಾರೆ ಟ್ವೀಟ್ ಮಾಡಿದ್ದಾರೆ.