ಹೇಮಾ ಸಮಿತಿ ವರದಿ ಬೆನ್ನಲ್ಲಿ ಕೇರಳ ಚಿತ್ರ ರಂಗದಲ್ಲಿ ಅಲ್ಲೋಲ ಕಲ್ಲೋಲವಾಗಿದೆ. ಖ್ಯಾತ ನಿರ್ದೇಶಕ ರಂಜಿತ್ ವಿರುದ್ಧ ಅಸ್ವಾಭಾವಿಕ ಲೈಂಗಿಕ ಕಿರುಕುಳದ ಆರೋಪದಲ್ಲಿ ಯುವಕನೋರ್ವ ದೂರು ದಾಖಲಿಸಿದ್ದಾರೆ.
ಪ್ರಕರಣವು 2012ರಲ್ಲಿ ಬೆಂಗಳೂರಿನಲ್ಲಿ ನಡೆದಿತ್ತು ಎನ್ನಲಾಗಿದ್ದು, ಚಿತ್ರರಂಗದೊಳಗಿನ ದುರ್ನಡತೆಯ ಕುರಿತು ತನಿಖೆ ನಡೆಸುತ್ತಿರುವ SIT ಪೊಲೀಸ್ ತಂಡಕ್ಕೆ ದೂರು ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಸ್ತುತ ಕೋಯಿಕ್ಕೋಡ್‌ನ ಪಂಚತಾರಾ ಹೊಟೇಲ್ ಉದ್ಯೋಗದಲ್ಲಿರುವ ಸಂತ್ರಸ್ತ ಯುವಕ, 2012 ರಲ್ಲಿ ಕೋಝಿಕ್ಕೋಡ್‌ನಲ್ಲಿ ʼಬವುತ್ತಿಯುಡೆ ನಾಮತಿಲ್ʼ ಚಿತ್ರದ ಶೂಟಿಂಗ್‌ನಲ್ಲಿ ರಂಜಿತ್ ಅವರನ್ನು ಮೊದಲು ಭೇಟಿಯಾಗಿದ್ದರು. ರಂಜಿತ್ ಅವರು ಚಿತ್ರದ ಸೆಟ್‌ನಲ್ಲಿ ಯುವಕನ ಬಗ್ಗೆ ಆಸಕ್ತಿ ವಹಿಸಿ, ತಮ್ಮ ಹೋಟೆಲ್ ಕೋಣೆಗೆ ಆಹ್ವಾನಿಸಿದರು. ಅಲ್ಲಿ ಅವರು ಯುವಕನಿಗೆ ಸಂಭಾವ್ಯ ನಟನಾ ಅವಕಾಶಗಳ ಬಗ್ಗೆ ಚರ್ಚಿಸಿ ತಮ್ಮನ್ನು ಭೇಟಿಯಾಗುವಂತೆ ಹೇಳಿ ಕಳುಹಿಸಿದ್ದಾರೆ.
ಎರಡು ದಿನಗಳ ನಂತರ ರಂಜಿತ್ ಆಹ್ವಾನದ ಮೇರೆಗೆ ಯುವಕ ಬೆಂಗಳೂರಿನ ತಾಜ್ ಹೋಟೆಲ್‌ಗೆ ಹೋಗಿದ್ದಾನೆ.
ಹೊಟೇಲ್ ಕೋಣೆಗೆ ಪ್ರವೇಶಿಸಿದಾಗ, ರಂಜಿತ್ ವಿಪರೀತವಾಗಿ ಕುಡಿದಿರುವುದನ್ನು ಸಂತ್ರಸ್ತ ಯುವಕ ಕಂಡುಕೊಂಡಿದ್ದಾರೆ. ರಂಜಿತ್ ಸಂತ್ರಸ್ತನಿಗೆ ಮದ್ಯವನ್ನು ಸೇವಿಸುವಂತೆ ಬಲವಂತಪಡಿಸಿದರು ಎನ್ನಲಾಗಿದ್ದು, ಯುವಕ ಅದೇ ಮೊದಲ ಬಾರಿಗೆ ಮದ್ಯ ಸೇವಿಸಿದ್ದಾಗಿ ಹೇಳಿಕೊಂಡಿದ್ದಾರೆ. ಬಳಿಕ ನಿರ್ದೇಶಕ ರಾತ್ರಿಯಿಡೀ ಲೈಂಗಿಕ ದೌರ್ಜನ್ಯ ಮಾಡಿದ್ದಾರೆ ಎಂದು ಯುವಕ ಆರೋಪಿಸಿದ್ದಾರೆ.
ಮರುದಿನ ರಂಜಿತ್ ಯುವಕನಿಗೆ ಊರಿಗೆ ಹೋಗುವಂತೆ ಹೇಳಿದ್ದಾರೆ. ಆ ಬಳಿಕ ರಂಜಿತ್ ಅವರನ್ನು ಸಂಪರ್ಕಿಸಲು ಹಲವು ಬಾರಿ ಪ್ರಯತ್ನಿಸಿ ವಿಫಲವಾಗಿದ್ದೇನೆ ಎಂದು ಸಂತ್ರಸ್ತ ಯುವಕ ಹೇಳಿದ್ದಾರೆ.