ವಯನಾಡಿನಲ್ಲಿ ಭೀಕರ ಭೂ ಕುಸಿತ ದುರಂತದಲ್ಲಿ ಮೃತರ ಸಂಖ್ಯೆ 360ರ ಗಡಿ ದಾಟಿದೆ. ಇನ್ನು ಕೂಡ 300 ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ. ಈ ಭೀಕರ ದುರಂತಕ್ಕೆ ದೇಶವೇ ಬೆಚ್ಚಿಬಿದ್ದಿದೆ. ಸಾಂಭವ್ಯ ಘಟನೆಯನ್ನು ತಡೆಯಲು ವಿವಿಧ ರಾಜ್ಯಗಳು ಮುಂದಾಗಿದೆ. ಈ ಮಧ್ಯೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಬಳಿಯೂ ಅಂಥದ್ದೇ ಅನಾಹುತ ಸಂಭವಿಸಬಹುದಾದ ಭೀತಿ ಎದುರಾಗಿದೆ.
ಮಂಗಳೂರು ನಗರ ಹೊರವಲಯದ ವಾಮಂಜೂರು ಸಮೀಪದ ಕೆತ್ತಿಕಲ್ ಬಳಿ ಗುಡ್ಡೆ ಮಣ್ಣು ಕುಸಿಯುತ್ತಲೇ ಇದ್ದು ಆತಂಕ ಸೃಷ್ಟಿಸಿದೆ. ಈ ಗುಡ್ಡದ ಮೇಲ್ಭಾಗದಲ್ಲಿ 200ಕ್ಕೂ ಹೆಚ್ಚು ಮನೆಗಳಿದ್ದು, ಒಂದು ವೇಳೆ ಗುಡ್ಡ ಕುಸಿದರೆ ವಾಯನಾಡಿನಲ್ಲಿ ನಡೆದ ದುರಂತ ಇಲ್ಲಿಯೂ ಸಂಭವಿಸುವ ಆತಂಕ ಎದುರಾಗಿದೆ.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ಅವೈಜ್ಞಾನಿಕವಾಗಿ ಗುಡ್ಡ ಅಗೆತ ಮಾಡಿರುವ ಕಾರಣ ಇದೀಗ ಭಾರಿ ಮಳೆಯ ಸಂದರ್ಭದಲ್ಲಿ ಗುಡ್ಡದ ಮಣ್ಣು ಕುಸಿಯುತ್ತಿದೆ. ಹೆದ್ದಾರಿ ಕಾಮಗಾರಿ ಜೊತೆ ಮಣ್ಣು ಗಣಿಗಾರಿಕೆ ನಡೆಸಿದ ಆರೋಪವೂ ಇಲ್ಲಿ ಕೇಳಿಬಂದಿದೆ.
ಸದ್ಯ ಕುಸಿದಿರುವ ಗುಡ್ಡದ ಸಮೀಪದಲ್ಲಿರುವ ಮನೆಗಳಿಗೆ ಅಧಿಕಾರಿಗಳು ನೋಟಿಸ್ ನೀಡಿ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಕೂಡ ಸೂಚಿಸಿದ್ದಾರೆ.