ದಕ್ಷಿಣ ಕನ್ನಡ ಜಿಲ್ಲೆಯ ಸೋಮೇಶ್ವರ ಪುರಸಭೆಯ ವ್ಯಾಪ್ತಿಗೆ ಸೇರಿರುವ ಕೊಲ್ಯ ಎನ್ನುವ ಪ್ರದೇಶದಲ್ಲಿ ಹಸುವೊಂದಕ್ಕೆ ಬುಧವಾರ ದಯಾಮರಣ ನೀಡಿರುವ ಬಗ್ಗೆ ವರದಿಯಾಗಿದೆ.
ಈ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಹಸು ಸಾರ್ವಜನಿಕರಿಗೆ ಸಮಸ್ಯೆಯನ್ನು ಉಂಟು ಮಾಡುತ್ತಿತ್ತು. ಅನವಶ್ಯಕವಾಗಿ ಜರನ್ನು ತಿವಿಯಲು ಹೋಗುತ್ತಿತ್ತು. ವಿಚಿತ್ರವಾಗಿ ವರ್ತನೆ ಮಾಡುತ್ತಿದ್ದ ಹಸುವಿನ ಬಗ್ಗೆ ದೂರುಗಳು ಕೇಳಿಬಂದಿದ್ದವು. ಕಳೆದ ಎರಡು ದಿನಗಳಿಂದಲೂ ಇದೇ ವರ್ತನೆ ತೋರಿಸಿದ್ದ ಹಸುವನ್ನು ಸ್ಥಳೀಯರೇ ಸೇರಿ ಕಟ್ಟಿ ಹಾಕಿದ್ದರು. ಇತ್ತೀಚೆಗೆ ಮಹಿಳೆಯೊಬ್ಬರ ಮೇಲೂ ದಾಳಿ ನಡೆಸಿತ್ತು.
ಇನ್ನು ಹಸು ಈ ರೀತಿ ವರ್ತಿಸುತ್ತಿರುವುದು ಸಾರ್ವಜನಿಕರಿಗೆ ವಿಚಿತ್ರವಾಗಿ ಕಂಡಿತ್ತು. ಸಾಮಾನ್ಯವಾಗಿ ಕೆಲವೊಮ್ಮೆ ಕೆಲವು ನಾಯಿಗಳು ಮಾತ್ರ ಈ ರೀತಿ ವಿಚಿತ್ರವಾಗಿ ವರ್ತನೆ ಮಾಡುತ್ತವೆ. ಆದರೆ, ಈ ಭಾಗದಲ್ಲಿ ಹಸು ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡಲು ಮುಂದಾಗುತ್ತಿತ್ತು. ಹಸುವಿನ ವರ್ತನೆಯೇ ಸ್ಥಳೀಯರಲ್ಲಿ ಅನುಮಾನ ಮೂಡಿಸಿತ್ತು.
ಹಸುವಿನ ಆರೋಗ್ಯ ಪರಿಶೀಲನೆ ಮಾಡಿದ ಇಲ್ಲಿನ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರಾದ ಡಾ. ಅರುಣ್ ಕುಮಾರ ಶೆಟ್ಟಿ ಹಸುವಿನ ವರ್ತನೆಗಳನ್ನು ಪರಿಶೀಲನೆ ಮಾಡಿದ ಮೇಲೆ ಅದಕ್ಕೆ ರೇಬಿಸ್ ರೋಗ ಇರುವುದು ದೃಢಪಟ್ಟಿತ್ತು. ಹೀಗಾಗಿ, ಹಸುವಿಗೆ ದಯಾಮರಣ ನೀಡಲಾಗಿದೆ ಎಂದು ಹೇಳಲಾಗಿದೆ.
ಹುಚ್ಚು ನಾಯಿಯ ಕಡಿತದಿಂದ ಹಸುವಿಗೆ ರೇಬಿಸ್ ಹಬ್ಬಿರುವ ಸಾಧ್ಯತೆ ಇದೆ. ರೇಬಿಸ್ ದೃಢಪಟ್ಟ ಹಸು ಚೇತರಿಸಿಕೊಳ್ಳುವ ಸಾಧ್ಯತೆ ತುಂಬಾ ಕಡಿಮೆ ಅಲ್ಲದೇ ಇದರಿಂದ ಇತರಿಗೂ, ಹಸುವಿನ ಆರೋಗ್ಯಕ್ಕೂ ಸಮಸ್ಯೆ ಹೀಗಾಗಿ, ದಯಾಮರಣ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ.