ಮಂಗಳೂರು ನಗರದ ಲಾಲ್‌ಬಾಗ್ ಬಳಿಯ ರೆಸ್ಟೋರೆಂಟ್ ಒಂದರಲ್ಲಿ ಯುವತಿ ಮೇಲೆ ಕಿಡಿಗೇಡಿಗಳು ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಯುತ್ತಿದ್ದು, ಆರೋಪಿಗಳನ್ನು ಶೀಘ್ರ ಬಂಧಿಸುತ್ತೇವೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್‌ವಾಲ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅ.25ರಂದು ಘಟನೆ ನಡೆದಿದ್ದು, ಹೊಟೇಲ್‌ನ ಪಾರ್ಕಿಂಗ್ ಜಾಗದಲ್ಲಿ ಗಲಾಟೆಯಾಗಿದೆ. ಯುವತಿ ನೀಡಿದ ದೂರಿನ ಪ್ರಕಾರ ಈ ಬಗ್ಗೆ ಕೇಸ್ ದಾಖಲಿಸಿ ತನಿಖೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಸಿಸಿ ಕ್ಯಾಮೆರಾ ಪರಿಶೀಲಿಸಿ ತನಿಖೆ ಮಾಡುತ್ತಿದ್ದೇವೆ. ಅಷ್ಟೇ ಅಲ್ಲ ಯುವತಿಯ ಕಪಾಳಕ್ಕೆ ಹೊಡೆದವರು ಮತ್ತು ಆಕೆಯ ಜೊತೆ ಅಸಭ್ಯವಾಗಿ ವರ್ತಿಸಿದವರನ್ನು ಬಂಧಿಸುತ್ತೇವೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ನಗರದ ಲಾಲ್‌ಬಾಗ್‌ನ ಹೋಟೆಲ್‌ವೊಂದರ ಬಳಿ ಯುವಕರ ತಂಡವೊಂದು ತನ್ನ ಮೇಲೆ ಹಲ್ಲೆ ಮಾಡಿದೆ. ಈ ಬಗ್ಗೆ ಬರ್ಕೆ ಠಾಣೆಗೆ ದೂರು ನೀಡಿದರೂ ಯಾವುದೇ ಕ್ರಮ ಆಗಿಲ್ಲ ಎಂದು ಯುವತಿ ಆರೋಪಿಸಿದ್ದಲ್ಲದೆ ತನ್ನ ಮಾತಿನ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು.