ಆಟವಾಡುತ್ತಿದ್ದ ಎರಡೂವರೆ ವರ್ಷದ ಮಗುವನ್ನು ಅಪಹರಿಸಿದ ಘಟನೆ ನಗರದ ಪಡೀಲ್ ಬಳಿ ಸಂಭವಿಸಿದ್ದು ಕಂಕನಾಡಿ ನಗರ ಠಾಣೆಯ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಎರಡು ಗಂಟೆಯಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೇರಳ ಎರ್ನಾಕುಲಂ ಜಿಲ್ಲೆಯ ತಾತಾಪಿಲ್ಲಿ ನಿವಾಸಿ ಅನೀಶ್ ಕುಮಾರ್(59)ಬಂಧಿತ ಆರೋಪಿ.
ಪಡೀಲ್‌ನ ಅರಣ್ಯ ಇಲಾಖೆಯ ಸಸ್ಯಕ್ಷೇತ್ರದಲ್ಲಿ ಕೆಲಸ ಮಾಡಿಕೊಂಡಿದ್ದ ಹಾವೇರಿ ಜಿಲ್ಲೆ ಶಿಗ್ಗಾಂವಿ ಮೂಲದ ಮಹಿಳೆಯ ಎರಡೂವರೆ ವರ್ಷದ ಹೆಣ್ಣು ಮಗು ಮತ್ತು ಮತ್ತೊಬ್ಬ ಕಾರ್ಮಿಕರ ಹೆಣ್ಣುಮಗು ಅಲ್ಲಿಯೇ ಪಕ್ಕದಲ್ಲಿ ಆಟವಾಡುತ್ತಿದ್ದವು. ಸಂಜೆ 4.30ರ ವೇಳೆಗೆ ನೋಡುವಾಗ ಒಂದು ಮಗು ಕಾಣೆಯಾಗಿತ್ತು. ಹಲವೆಡೆ ಹುಡುಕಾಟ ನಡೆಸಿ ಸುಮಾರು 7.30ಕ್ಕೆ ಕಂಕನಾಡಿ ನಗರ ಠಾಣಾ ಪೊಲೀಸರಿಗೆ ದೂರು ನೀಡಿದ್ದರು.
ರೈಲ್ವೆ ನಿಲ್ದಾಣದ ಸಿಸಿ ಕ್ಯಾಮೆರಾವನ್ನು ಪರಿಶೀಲಿಸುವಾಗ ಓರ್ವ ವ್ಯಕ್ತಿ ತನ್ನೊಂದಿಗೆ ಮಗುವನ್ನು ಕರೆದೊಯ್ಯುವುದು ಕಂಡು ಬಂದಿತ್ತು. ಕೂಡಲೇ ಕಾಸರಗೋಡು ಪೊಲೀಸರಿಗೆ ಮಾಹಿತಿ ನೀಡಲಾಯಿತು. ಅಲ್ಲಿಗೆ ತೆರಳಿದ ಮಂಗಳೂರಿನ ಪೊಲೀಸರು ಕಾಸರಗೋಡು ಪೊಲೀಸರ ಜತೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಮಗು ಸಹಿತವಾಗಿ ರಾತ್ರಿ 9.30ಕ್ಕೆ ವಶಕ್ಕೆ ಪಡೆದಿದ್ದಾರೆ.
ಮಗು ಸುರಕ್ಷಿತವಾಗಿದ್ದು ಅದನ್ನು ಹೆತ್ತವರಿಗೆ ಒಪ್ಪಿಸಲಾಗಿದೆ. ಆರೋಪಿ ವಿರುದ್ಧ ಅಪಹರಣ ಪ್ರಕರಣ ದಾಖಲಾಗಿದೆ. ಆರೋಪಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.