ಮಂಗಳೂರು:ಬೀದಿ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳ ಮಧ್ಯೆ ಗುರುವಾರ ಹೊಡೆದಾಟ ನಡೆದಿದ್ದು, ಈ ಕುರಿತುಬಂದರು ಠಾಣೆಗೆ ದೂರು ನೀಡಲಾಗಿದೆ.
ದ.ಕ.ಜಿಲ್ಲಾ ಬೀದಿ ವ್ಯಾಪಾರಿಗಳ ಶ್ರೇಯಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಮತ್ತಿತರರು ಹಲ್ಲೆ ನಡೆಸಿರುವುದಾಗಿ ಆರೋಪಿಸಿ ಸಂಘದ ಕೋಶಾಧಿಕಾರಿ ಆಸೀಫ್ ಬಾವ ಉರುಮಣೆ ಮತ್ತು ಉಪಾಧ್ಯಕ್ಷ ರಹ್ಮಾನ್ ಅಡ್ಯಾರ್ ಎಂಬವರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಮಧ್ಯೆ ಸಂಘದ ಕೋಶಾಧಿಕಾರಿ ಆಸೀಫ್ ಬಾವ ಉರುಮಣೆ, ಪ್ರಧಾನ ಕಾರ್ಯದರ್ಶಿ ಹರೀಶ್ ಪೂಜಾರಿ, ನವಾಝ್ ಕಣ್ಣೂರು, ಆನಂದ ಮತ್ತಿತರರ ವಿರುದ್ಧ ಬೀದಿಬದಿ ವ್ಯಾಪಾರಸ್ಥರ ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್ ಆರ್.ಎಸ್. ಬಂದರು ಠಾಣೆಗೆ ದೂರು ನೀಡಿದ್ದಾರೆ.
ಗುರುವಾರ ಸಂಜೆ ಸುಮಾರು 4ಕ್ಕೆ ಸಂಘದ ಕಚೇರಿಯಲ್ಲಿ ಸಭೆ ನಡೆಸುತ್ತಿದ್ದಾಗ ಆರೋಪಿಗಳು ಕಚೇರಿಗೆ ಅಕ್ರಮವಾಗಿ ಪ್ರವೇಶಿಸಿ ಜೀವ ಬೆದರಿಕೆ ಹಾಕಿ, ಹಲ್ಲೆ ನಡೆಸಲು ಮುಂದಾಗಿದ್ದಾರೆ ಎಂದು ಆರೋಪಿಸಲಾಗಿದೆ. ಸಂಘದ ಬೋರ್ಡ್ ಮತ್ತು ಸಿಐಟಿಯು ಬಾವುಟವನ್ನು ಎಸೆದು ದಾಂಧಲೆ ನಡೆಸಿದ್ದಾರೆ ಎಂದು ಸಂತೋಷ್ ದೂರಿನಲ್ಲಿ ತಿಳಿಸಿದ್ದಾರೆ.