ಮಗಳ ಮದುವೆಗಾಗಿ ಭರ್ಜರಿ ತಯಾರಿ ನಡೆಸುತ್ತಿದ್ದ ತಂದೆಯೋರ್ವ ಅಪಘಾತದಲ್ಲಿ ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮಂಜುನಾಥ್ ಮೃತ ದುರ್ದೈವಿ. ಇವರು ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಇವರು ಬೆಳಗ್ಗೆ ಆಮಂತ್ರಣ ಪತ್ರಿಕೆ ಹಂಚಿ ರಾತ್ರಿ ಕೆಲಸಕ್ಕೆ ಹೋಗಿದ್ದರು. ಈ ವೇಳೆ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ಕಾರು ಕೆಟ್ಟು ನಿಂತಿದೆ ಎಂದು ಅದನ್ನು ಟೋಯಿಂಗ್ ವೆಹಿಕಲ್ ಕರೆಸಿ ತೆರವು ಮಾಡಿಸುವಾಗ ವೇಗವಾಗಿ ಬಂದ ಟಾಟಾ ಏಸ್ ವಾಹನ ಡಿಕ್ಕಿ ಹೊಡೆದಿದ್ದು ಅಧಿಕಾರಿ ಮಂಜುನಾಥ್ ಮೃತಪಟ್ಟಿದ್ದಾರೆ.
ಆಗಸ್ಟ್ 10ರಂದು ಮೃತ ಮಂಜುನಾಥ್ ಮಗಳ ಮದುವೆ ಇತ್ತು. ಮಗಳ ಮದುವೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದ ಮಂಜುನಾಥ್, ನಿನ್ನೆ ಬೆಳಗ್ಗೆಯೂ ಮದುವೆಯ ಆಮಂತ್ರಣ ಪತ್ರಿಕೆ ಹಂಚಿ ಬಂದಿದ್ದರು.
ಇದೀಗ ಮಂಜುನಾಥ್ ಅಗಲಿಕೆಯಿಂದ ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.
ಈ ಕುರಿತು ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ