ಪತ್ನಿಯನ್ನು ತಾನೇ ಕೊಲೆಗೈದು ಪೊಲೀಸರ ಮುಂದೆ ಅಮಾಯಕನಂತೆ ನಾಟಕವಾಡಿದ್ದ ಪತಿಯನ್ನು ಅರೆಸ್ಟ್ ಮಾಡುವಲ್ಲಿ ಬೆಂಗಳೂರಿನ ಬಾಗಲೂಟು ಠಾಣೆಯ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಮೆಹಬೂಬ್ ಪಾಷಾ(50) ಬಂಧಿತ ಆರೋಪಿ. ಆ.25 ರಂದು ಈತ ತನ್ನ ಪತ್ನಿ ಮಮ್ತಾಜ್‌ಳನ್ನು ಯಾರೋ ಕೊಲೆ ಮಾಡಿರುವುದಾಗಿ ದೂರು ದಾಖಲಿಸಿದ್ದ.
ಕೂಲಿ ಕೆಲಸ ಮಾಡುತ್ತಿದ್ದ ಮಹಬೂಬ್ ಪಾಷಾ ತನ್ನ ಪತ್ನಿ ಮಮ್ತಾಜ್ ಜೊತೆಗೆ ಬಾಗಲೂರಿನಲ್ಲಿ ವಾಸವಾಗಿದ್ದ. ಕೌಟುಂಬಿಕ ಕಾರಣಗಳಿಂದ ಪತ್ನಿಯೊಡನೆ ಆಗಾಗೆ ಜಗಳ ನಡೆಯುತ್ತಿದ್ದು, ಭಾನುವಾರ ಜಗಳ ವಿಕೋಪಕ್ಕೆ ತಿರುಗಿತ್ತು. ಕುಪಿತಗೊಂಡ ಪಾಷಾ ತನ್ನ ಪತ್ನಿಯನ್ನು ಹೊಡೆದು ಕೊಲೆ ಮಾಡಿದ್ದ. ಬಳಿಕ ಪೊಲೀಸ್ ಠಾಣೆಗೆ ಬಂದು ತನ್ನ ಪತ್ನಿಯನ್ನು ಯಾರೋ ಕೊಲೆಗೈದು ಸೀಬೆ ತೋಟದಲ್ಲಿ ಶವ ಎಸೆದಿದ್ದಾರೆಂದು ದೂರು ದಾಖಲಿಸಿದ್ದ.
ಈ ಕುರಿತು ತನಿಖೆ ಕೈಗೊಂಡ ಪೊಲೀಸರು ಮೆಹಬೂಬ್ ಪಾಷಾನನ್ನು ವಿಚಾರಣೆಗೊಳಪಡಿಸಿದಾಗ ಪ್ರಾಥಮಿಕ ತನಿಖೆಯಲ್ಲೇ ಅನುಮಾನ ವ್ಯಕ್ತವಾಗಿತ್ತು. ಬಳಿಕ ತನಿಖೆಯಲ್ಲಿ ಮೆಹಬೂಬ್ ಪಾಷಾನೇ ಕೊಲೆ ಮಾಡಿರುವುದು ಬಯಲಾಗಿತ್ತು.
ಇದೀಗ ಆರೋಪಿಯನ್ನು ಬಂಧಿಸಿದ ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.