ಪತ್ನಿಯೋರ್ವಳು ಪತಿಗೆ ತಾನೇ ಮುಂದೆ ನಿಂತು 2ನೇ ವಿವಾಹ ಮಾಡಿರುವ ಅಪರೂಪದ ಘಟನೆ ಮೆಹಬೂಬಾಬಾದ್ ಜಿಲ್ಲೆಯಲ್ಲಿ ನಡೆದಿದೆ.
ಸುರೇಶ್ ಹಾಗೂ ಸರಿತಾ ಕೆಲ ವರ್ಷಗಳ ಹಿಂದೆ ವಿವಾಹವಾಗಿದ್ದರು. ದಂಪತಿಗೆ ಗಂಡು ಮಗುವಿದೆ. ಅದೇ ಸಮಯದಲ್ಲಿ ಸುರೇಶ್ಗೆ ಸಂಧ್ಯಾ ಎಂಬ ಯುವತಿ ಮೇಲೆ ಲವ್ ಆಗಿದೆ. ಸಂಧ್ಯಾ, ಮಾನಸಿಕ ಅಸ್ವಸ್ಥೆಯಾಗಿದ್ದಾಳೆ. ಸಂಧ್ಯಾ ಅವರ ತಂದೆ ತಾಯಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಈಕೆ ಎರಡನೇ ಮಗಳು. ಮೊದಲ ಮಗಳಿಗೆ ಈಗಾಗಲೇ ಮದುವೆಯಾಗಿದೆ. ಈ ಸಂಧ್ಯಾ, ಸುರೇಶ್ ಅವರ ಸಂಬಂಧಿಕರ ಮಗಳು. ಸುರೇಶ್ ಮದುವೆಯಾಗಿರುವುದು ಗೊತ್ತಿದ್ದರೂ ಸಂಧ್ಯಾ ಕೂಡ ಆತನನ್ನು ಇಷ್ಟಪಟ್ಟಿದ್ದಳು.
ಸಂಧ್ಯಾ ಮಾನಸಿಕ ಅಸ್ವಸ್ಥೆಯಾಗಿರುವುದರಿಂದ ಆಕೆಯನ್ನು ಬೇರೆಯವರಿಗೆ ಕೊಟ್ಟು ಮದುವೆ ಮಾಡಿದರೆ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಕುಟುಂಬಸ್ಥರು ಭಾವಿಸಿದ್ದರು. ಹೀಗಾಗಿ ಸುರೇಶನ ಜತೆ ಮದುವೆ ಮಾಡಲು ಬಯಸಿದ್ದರು. ಇದಕ್ಕೆ ಪತ್ನಿ ಸರಿತಾ ಕೂಡ ಒಪ್ಪಿಕೊಂಡಿದ್ದಾರೆ. ಎರಡೂ ಕುಟುಂಬಸ್ಥರ ಸಮ್ಮುಖದಲ್ಲಿ ಸುರೇಶ್, ಸಂಧ್ಯಾಳನ್ನು ಶಾಸ್ತ್ರೋಕ್ತವಾಗಿ ವರಿಸಿದ್ದಾರೆ.
ಪತಿಗೆ ಎರಡನೇ ಮದುವೆ ಮಾಡಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸರಿತಾ, ನನ್ನ ಗಂಡ ಎರಡನೇ ಮದುವೆ ಬಗ್ಗೆ ಕೇಳಿದಾಗ ಮಾನವೀಯ ಹೃದಯದಿಂದ ನಾನಿದನ್ನು ಮಾಡಿದ್ದೇನೆ. ಸಂಧ್ಯಾ ಕೂಡ ನನ್ನ ತಂಗಿಯಂತೆ ಎಂದು ಹೇಳಿದ್ದಾರೆ.
ಸುರೇಶ್ ಮತ್ತು ಸಂಧ್ಯಾ ಅವರ ಮದುವೆ ಸಮಾರಂಭದಲ್ಲಿ ಸರಿತಾ ಸ್ವತಃ ಎಲ್ಲ ವ್ಯವಹಾರಗಳನ್ನು ನೋಡಿಕೊಂಡರು. ಅಲ್ಲದೇ ಸುರೇಶ್, ಸಂಧ್ಯಾಳ ಕುತ್ತಿಗೆಗೆ ತಾಳಿ ಕಟ್ಟುವಾಗಲೂ ಸರಿತಾ ಜತೆಯಲ್ಲೇ ಇದ್ದರು. ಸರಿತಾ ದಂಪತಿಯ ಈ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.