ವಿದ್ಯುತ್ ಸಮಸ್ಯೆ ಕುರಿತು ಇಂಧನ ಸಚಿವ ಕೆ.ಜೆ.ಜಾರ್ಜ್ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜೊತೆ ಸಭೆ ನಡೆಸುವಾಗಲೇ ಪದೇಪದೇ ವಿದ್ಯುತ್ ಕೈಕೊಟ್ಟು ಮುಜುಗರ ಅನುಭವಿಸಿದ ಬಗ್ಗೆ ವರದಿಯಾಗಿದೆ.
ಪದೇ ಪದೇ ವಿದ್ಯುತ್ ಸ್ಥಗಿತಗೊಂಡಾಗ ‘ಏಕೆ ಪವರ್ ಕಟ್ ಮಾಡುತ್ತೀರಿ’ ಎಂದು ಸಿಬ್ಬಂದಿಯನ್ನು ಸಿಟ್ಟಿನಿಂದ ಅವರು ಪ್ರಶ್ನಿಸಿದ್ದಾರೆ.
ಬೆಂಗಳೂರಿಗೆ ತೆರಳುವ ಮುನ್ನ ಸಚಿವರು ವಿದ್ಯುತ್ ಅಡಚಣೆಗಾಗಿ ಬೆಸ್ಕಾಂ ಕಾರ್ಯಪಾಲಕ ಎಂಜಿನಿಯರ್ ಶುಭಾ ಅವರನ್ನು ತರಾಟೆ ತೆಗೆದುಕೊಂಡಿದ್ದಾರೆ. ಮುಖ್ಯಮಂತ್ರಿ ಬಂದಾಗ ಈ ರೀತಿ ಆಗಬಾರದು ಎಂದು ಎಚ್ಚರಿಕೆಯನ್ನು ನೀಡಿದ್ದಾರೆ. ಆಗ ಅಧಿಕಾರಿ ಕಣ್ಣೀರಿಟ್ಟಿದ್ದು, ಸ್ಥಳದಲ್ಲೇ ಇದ್ದ ಇತರ ಅಧಿಕಾರಿಗಳು ಅವರನ್ನು ಸಮಾಧಾನಪಡಿಸಿದ್ದಾರೆ.
ವಿದ್ಯುತ್ ಸಚಿವರು ಸಭೆ ನಡೆಸುತ್ತಿದ್ದಾಗಲೇ ವಿದ್ಯುತ್ ಅಡಚಣೆ ಎಂದು ನೀವು ವರದಿ ಮಾಡುತ್ತೀರಿ. ನಾವು ಅಡ್ಜಸ್ಟ್ ಮಾಡಿಕೊಳ್ಳುತ್ತೇವೆ. ನೀವೂ ಅಡ್ಜಸ್ಟ್ ಮಾಡಿಕೊಳ್ಳಿ ಎಂದು ಸಭೆಯಲ್ಲಿದ್ದ ಮಾಧ್ಯಮದವರಿಗೆ ಅವರು ಹೇಳಿದ್ದಾರೆ.
ಬಳಿಕ ಸುದ್ದಿಗಾರರರೊಂದಿಗೆ ಮಾತನಾಡಿದ ಸಚಿವರು, ಇದು ಬೆಸ್ಕಾಂನಿಂದ ಆಗಿರುವ ಸಮಸ್ಯೆ ಅಲ್ಲ. ಜಿಲ್ಲಾ ಪಂಚಾಯಿತಿಯಲ್ಲಿರುವ ಜನರೇಟರ್ ಕೈಕೊಟ್ಟಿದ್ದರಿಂದ ವಿದ್ಯುತ್ ಸ್ಥಗಿತಗೊಂಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.