Breaking:

ಕುರಿ ಮಾಂಸ ಸಾಗಾಟದ ವೇಳೆ ತಡೆದು ನಾಯಿ ಮಾಂಸ ಎಂದ ಪುನೀತ್ ಕೆರೆಹಳ್ಳಿ; ರೈಲ್ವೇ ನಿಲ್ದಾಣದಲ್ಲಿ ರಾದ್ದಾಂತ ಸೃಷ್ಟಿ, ಬಂಧನ

ರಾಜಸ್ಥಾನದಿಂದ ಬೆಂಗಳೂರಿಗೆ ನಾಯಿ ಮಾಂಸ ಸರಬರಾಜು ಆಗುತ್ತಿದೆ ಎಂದು ಇದ್ರೀಶ್ ಪಾಷಾ ಕೊಲೆ ಪ್ರಕರಣದ ಆರೋಪಿ ಪುನೀತ್ ಕೆರೆಹಳ್ಳಿ ತನ್ನ ಗ್ಯಾಂಗ್ ಜೊತೆ ಬಂದು ರಾದ್ದಾಂತ ಸೃಷ್ಟಿಸಿರುವ ಘಟನೆ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

ಅಬ್ದುಲ್‌ ರಜಾಕ್‌ ಎಂಬುವರು ಕಳೆದ 12 ವರ್ಷಗಳಿಂದ  ರಾಜಸ್ಥಾನದಿಂದ ಬೆಂಗಳೂರಿಗೆ ಕುರಿ‌ ಮಾಂಸ  ತರಿಸಿ ವ್ಯಾಪಾರ ಮಾಡುತ್ತಿದ್ದರು. ಎರಡು ದಿನಕ್ಕೊಮ್ಮೆ ಜೈಪುರದಿಂದ ಬೆಂಗಳೂರಿಗೆ ಕುರಿ ಮಾಂಸ ಬರುತ್ತದೆ. ನಿನ್ನೆ ಎರಡು ಸಾವಿರ ಕೆಜಿ ಮಾಂಸ ಬಂದಿದೆ. ಪುನೀತ್ ಕೆರೆಹಳ್ಳಿ ಟೀಂ ಆರೋಪದ ಹಿನ್ನೆಕೆ ನಿನ್ನೆ ಆಹಾರ ಇಲಾಖೆ ಅಧಿಕಾರಿಗಳು ಮಾಂಸದ ಸ್ಯಾಂಪಲ್ ತೆಗೆದುಕೊಂಡು ಹೋಗಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ವ್ಯಾಪಾರಿ ಅಬ್ದುಲ್ ರಜಾಕ್, ಪುನೀತ್ ಕೆರೆಹಳ್ಳಿ ರೋಲ್ ಕಾಲ್ ಮಾಡಲು ಬಂದಿದ್ದ. ರೋಲ್‌ ಕಾಲ್‌ಗೆ ಅವಕಾಶ ಕೊಟ್ಟಿಲ್ಲ ಎಂದು ಕುರಿ ಮಾಂಸದ ಜತೆ ನಾಯಿ ಮಾಂಸ ಬೆರೆಸಿದ ಆರೋಪ ಮಾಡಿದ್ದಾನೆ. ಇದು ಅಕ್ರಮ ವ್ಯಾಪಾರ ಅಲ್ಲ. ನಮ್ಮ ಬಳಿ ಎಲ್ಲ ಸರ್ಟಿಫಿಕೇಟ್ ಇದೆ. ಎಲ್ಲ ಬಾಕ್ಸ್‌ಗಳಲ್ಲಿ ಕುರಿ ಮಾಂಸ ಮಾತ್ರವಿದೆ. ನಾವು 12 ವರ್ಷದಿಂದ ವ್ಯಾಪಾರ ಮಾಡುತ್ತಿದ್ದೇವೆ. ಅವರೇ ಬಾಕ್ಸ್ ತೆರೆದಿದ್ದಾರೆ, ಕುರಿ ಮಾಂಸ ನೋಡಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಇನ್ನು ಜೈಪುರದಿಂದ ಬಂದ ಮಾಂಸದ ಬಗ್ಗೆ ಪುನೀತ್ ಕೆರೆಹಳ್ಳಿ ಮಾಡಿದ ಆರೋಪದ ವಿಷಯ ತಿಳಿದು ಸ್ಥಳಕ್ಕೆ ಬಿಬಿಎಂಪಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಅಧಿಕಾರಿಗಳು ದೌಡಾಯಿಸಿದ್ದು, ಸ್ಥಳೀಯ ಪೊಲೀಸರೊಂದಿಗೆ ಸೇರಿ ಮಾಂಸದ ಬಾಕ್ಸ್ ಗಳನ್ನು ತೆಗೆಸಿ, ಪರಿಶೀಲನೆ ಮಾಡಿದ್ದಾರೆ. ಗುಣಮಟ್ಟ ಹಾಗೂ ಮಾಂಸ ದೃಢೀಕರಣಕ್ಕಾಗಿ ಸ್ಯಾಂಪಲ್ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

 ಈ ವೇಳೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಪುನೀತ್ ರಾದ್ದಾಂತ ಸೃಷ್ಟಿಸಿದ ಹಿನ್ನೆಲೆ ಆತನಿಗೆ ಪೊಲೀಸರು ಬಂಧಿಸಿದ್ದಾರೆ.

Share this article

ಟಾಪ್ ನ್ಯೂಸ್