ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಈ ಬಾರಿ ಭಾರತದಿಂದ 117 ಕ್ರೀಡಾಪಟುಗಳು ಭಾಗವಹಿಸಲಿದ್ದು, ಅವರಲ್ಲಿ ಓರ್ವ ಶಾಸಕಿ ಕೂಡ ಇರುವುದು ವಿಶೇಷವಾಗಿದೆ.
ಶ್ರೇಯಸಿ ಸಿಂಗ್ ಬಿಹಾರದ ಜಮುಯಿ ವಿಧಾನಸಭಾ ಕ್ಷೇತ್ರದ ಹಾಲಿ ಬಿಜೆಪಿ ಶಾಸಕಿಯಾಗಿದ್ದಾರೆ. 32 ವರ್ಷದ ಶ್ರೇಯಸಿ ಸಿಂಗ್, ಮಾಜಿ ಸಚಿವ ದಿವಂಗತ ದಿಗ್ವಿಜಯ್ ಸಿಂಗ್ ಅವರ ಪುತ್ರಿಯಾಗಿದ್ದಾರೆ.
ಇವರು ಕಾಮನ್ವೆಲ್ತ್ ಗೇಮ್ಸ್ ಮತ್ತು ಏಷ್ಯಾಡ್‌ನಲ್ಲಿ ಪದಕ ಜಯಿಸಿದ್ದರು.
ಮೊದಲು ಒಲಿಂಪಿಕ್ಸ್ ಆಯ್ಕೆಯ ಪಟ್ಟಿಯಲ್ಲಿ ಶ್ರೇಯಸಿ ಅವರ ಹೆಸರಿರಲಿಲ್ಲ. ಟೋಕಿಯೊ ಒಲಿಂಪಿಯನ್ ಮನು ಭಾಕರ್ ಮಹಿಳೆಯರ 10 ಮೀ. ಪಿಸ್ತೂಲ್ ಮತ್ತು 25 ಮೀ. ಪಿಸ್ತೂಲ್ ಸ್ಪರ್ಧೆಗಳಲ್ಲಿ ಅರ್ಹತೆ ಪಡೆದಿದ್ದರು. ಹೀಗಾಗಿ ಒಂದು ಕೋಟಾವನ್ನು ಮರುಹಂಚಿಕೆ ಮಾಡಬಹುದಾಗಿತ್ತು. ಇದನ್ನು ಟ್ರ್ಯಾಪ್ ಶೂಟರ್‌ಗಾಗಿ ಬದಲಾಯಿಸಲಾಯಿತು. ಹೀಗಾಗಿ ಈ ಕೋಟಾದಲ್ಲಿ ಶ್ರೇಯಸಿ ಅವರನ್ನು ಆಯ್ಕೆ ಮಾಡಲಾಗಿದೆ.
ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶ್ರೇಯಸಿ, “ನಾನು ಒಲಿಂಪಿಕ್ಸ್ ಕ್ರೀಡಾಕೂಡದಲ್ಲಿ ದೇಶವನ್ನು ಪ್ರತಿನಿಧಿಸಬೇಕೆಂಬುದು ನನ್ನ ತಂದೆಯ ದೊಡ್ಡ ಕನಸಾಗಿತ್ತು. ತಂದೆಯ ಕನಸಿನಂತೆ ಒಲಿಂಪಿಕ್ಸ್ ಆಡುವ ಸೌಭಾಗ್ಯ ಒದಗಿ ಬಂದಿದೆ. ಕೂಟದಲ್ಲಿ ಶ್ರೇಷ್ಠ ಪ್ರದರ್ಶನ ತೋರುವ ಮೂಲಕ ಪದಕ ಗೆಲ್ಲುವುದು ನನ್ನ ಗುರಿ. ಇದಕ್ಕಾಗಿ ಎಲ್ಲರೂ ಪ್ರಾರ್ಥಿಸಬೇಕು ಎಂದು ಮನವಿ ಮಾಡಿದ್ದಾರೆ.
2020ರ ಚುನಾವಣೆಯಲ್ಲಿ ಜುಮಯಿ ಕ್ಷೇತ್ರದಿಂದ ಬಿಜೆಪಿ ಪರ ಸ್ಪರ್ಧಿಸಿದ್ದ ಶ್ರೇಯಸಿ 41 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.