ಪೆನ್ನು ಕದ್ದಿದ್ದಾನೆಂದು ಆರೋಪಿಸಿ ಬಡ ಪುಟ್ಟ ವಿದ್ಯಾರ್ಥಿಯೋರ್ವನ ಮೇಲೆ ಮಠದ ಗುರೂಜಿ ಮನಬಂದಂತೆ ಹಲ್ಲೆ ನಡೆಸಿದ ಅಮಾನವೀಯ ಘಟನೆ ರಾಯಚೂರು ನಗರದ ರಾಮಕೃಷ್ಣ ಆಶ್ರಮದಲ್ಲಿ ನಡೆದಿದೆ.
ಶ್ರವಣ್ ಕುಮಾರ್ ಹಲ್ಲೆಗೊಳಗಾದ ಬಾಲಕ. ರಾಮಕೃಷ್ಣ ಮಠದ ಗುರೂಜಿ ವೇಣುಗೋಪಾಲ್ ಎಂಬಾತ ಹಲ್ಲೆ ನಡೆಸಿರುವ ಆರೋಪಿ.
ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಶ್ರವಣ್ ಕುಮಾರ್ ನನ್ನು ಬಡತನದ ಕಾರಣಕ್ಕೆ ನಗರದ ಸ್ಟೇಷನ್ ರಸ್ತೆಯಲ್ಲಿರುವ ರಾಮಕೃಷ್ಣ ಆಶ್ರಮಕ್ಕೆ ಸೇರಿಸಲಾಗಿತ್ತು. ಆದರೆ ನಿನ್ನೆ ಆಕಸ್ಮಿಕವಾಗಿ ತಾಯಿ ಆಶ್ರಮಕ್ಕೆ ಭೇಟಿ ನೀಡಿ ಮಗುವನ್ನು ನೋಡಿದಾಗ ಮಗುವಿನ ಸ್ಥಿತಿ ಕಂಡು ಆಘಾತಕ್ಕೊಳಗಾಗಿದ್ದಾರೆ. ಬಳಿಕ ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಬಾಲಕನನ್ನು ಕತ್ತಲೆ ಕೋಣೆಯಲ್ಲಿ ಕೂಡಿಹಾಕಿ ಹಲ್ಲೆ ನಡೆಸಿರುವ ಆರೋಪ ಕೂಡ ಕೇಳಿಬಂದಿದೆ. ಹಲ್ಲೆಯಿಂದ ಬಾಲಕನ ಕಣ್ಣುಗಳು ಬಾವು ಬಂದಿದ್ದು ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಕುರಿತು ರಾಯಚೂರು ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.