Breaking:

ರೈಲಿನಲ್ಲಿ ರೀಲ್ಸ್ ಮಾಡುವವನನ್ನು ಹುಡುಕುತ್ತಾ ಹೋದಾಗ ಪೊಲೀಸರಿಗೆ ಕಾದಿತ್ತು ಶಾಕ್; ಎಡ ಕೈ ಕಾಲು ಕಳೆದುಕೊಂಡು ಹಾಸಿಗೆ ಪಾಲಾಗಿದ್ದ ಪರ್ಹಾತ್

ರೀಲ್ಸ್ ವಿಡಿಯೊಗಾಗಿ ಚಲಿಸುವ ರೈಲಿನಲ್ಲಿ ಸಾಹಸ ಮಾಡಲು ಹೋಗಿ ಯುವಕನೊಬ್ಬ ತನ್ನ ಎಡಗಾಲು ಹಾಗೂ ಎಡಗೈಯನ್ನು  ಕಳೆದುಕೊಂಡಿದ್ದಾನೆ.

ಫರ್ಹಾತ್ ಎನ್ನುವ ಮುಂಬೈನ ಯುವಕ ರೀಲ್ಸ್ ಹುಚ್ಚು ಬೆಳೆಸಿಕೊಂಡಿದ್ದ. ಇದಕ್ಕಾಗಿ ಆತ ಚಲಿಸುವ ರೈಲಿನಲ್ಲಿ  ಸಾಹಸ ಮಾಡುತ್ತಿದ್ದ. ಆ ವಿಡಿಯೊಗಳನ್ನು ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳುತ್ತಿದ್ದ.

ಈ ವಿಷಯ ಮುಂಬೈನ ಸೆಂಟ್ರಲ್ ರೈಲ್ವೆ ಆರ್‌ಪಿಎಫ್ ಪೊಲೀಸ್ ಅಧಿಕಾರಿಗಳ ಗಮನಕ್ಕೆ ಬಂದು ವಿಡಿಯೊದಲ್ಲಿರುವವನನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲು ಹೋದಾಗ ಅಚ್ಚರಿ ಕಾದಿತ್ತು.

ಫರ್ಹಾತ್ ಚಲಿಸುವ ರೈಲಿನಲ್ಲಿ ರೀಲ್ಸ್ ಮಾಡಲು ಹೋಗಿ ಕೈ-ಕಾಲು ಕಳೆದುಕೊಂಡು ಮನೆಯಲ್ಲಿ ಮಲಗಿರುವುದನ್ನು ಪೊಲೀಸರು ಕಂಡುಕೊಂಡಿದ್ದಾರೆ. ಬಳಿಕ ಪೊಲೀಸರು ಆತನ ಮೂಲಕವೇ ರೈಲಿನಲ್ಲಿ ರೀಲ್ಸ್ ಮಾಡದಂತೆ ಸಂದೇಶವನ್ನು ಸಮಾಜಕ್ಕೆ ಕಳುಹಿಸಿದ್ದಾರೆ.

ಇತ್ತೀಚೆಗೆ ಮಸೀದಿ ರೈಲು ನಿಲ್ದಾಣದಲ್ಲಿ ವಿಡಿಯೊಗಳಿಗಾಗಿ ಸಾಹಸ ಮಾಡುವಾಗ ಅವಘಡ ಸಂಭವಿಸಿದೆ. ದಯವಿಟ್ಟು ಯಾರೂ ಶಾರ್ಟ್ ವಿಡಿಯೊ ಹುಚ್ಚಿಗಾಗಿ ತೊಂದರೆಗೆ ಸಿಲುಕಬೇಡಿ ಎಂದು ಪೊಲೀಸರ ಸಮ್ಮುಖದಲ್ಲಿ ನೆಟ್ಟಿಗರಿಗೆ ಪರ್ಹಾತ್ ಮನವಿ ಮಾಡಿಕೊಂಡಿದ್ದಾನೆ.

ಈ ವಿಡಿಯೊವನ್ನು ಎಕ್ಸ್‌ ತಾಣದಲ್ಲಿ ಹಂಚಿಕೊಂಡಿರುವ ಸೆಂಟ್ರಲ್ ರೈಲ್ವೆ, ರೈಲಿನಲ್ಲಿ ಸಾಹಸಗಳನ್ನು ಮಾಡುವುದು ಅಪರಾಧ, ಯಾರಾದರೂ ಈ ರೀತಿ ಮಾಡಿದರೆ ನಮ್ಮ ಗಮನಕ್ಕೆ ತನ್ನಿ ಎಂದು ಮನವಿ ಮಾಡಿದ್ದಾರೆ.

Share this article

ಟಾಪ್ ನ್ಯೂಸ್