ಕರ್ನಾಟಕ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ಸಚಿವ ರಾಮಲಿಂಗ ರೆಡ್ಡಿ ಪುತ್ರಿ ಸೌಮ್ಯಾ ರೆಡ್ಡಿಯವರನ್ನು ನೇಮಕ ಮಾಡಿರುವುದಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕವಿತಾ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಕವಿತಾ ರೆಡ್ಡಿ, ಪಕ್ಷಕ್ಕಾಗಿ ದುಡಿಯುತ್ತಿರುವ, ಅಧ್ಯಕ್ಷರಾಗಲು ಅರ್ಹತೆಯಿರುವ ಮತ್ತು ಕಳೆದ 2 ವರ್ಷಗಳಿಂದ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದ ಅನೇಕ ಮಹಿಳಾ ನಾಯಕರಿಗೆ ಇದರಿಂದ ತೀವ್ರ ಅನ್ಯಾಯವಾಗಿದೆ ಎಂದು ತಿಳಿಸಿದ್ದಾರೆ.
ಅಂಬೇಡ್ಕರ್ ವಾದಿಯಾಗಿ ನಾನು ಕಂಡಂತೆ ಸ್ವತಂತ್ರ ಮಹಿಳಾ ನಾಯಕರನ್ನು ಪಕ್ಷದಲ್ಲಿ ತಮ್ಮ ಸ್ವಂತ ಅರ್ಹತೆ, ಕಠಿಣ ಪರಿಶ್ರಮ, ಸಾಮರ್ಥ್ಯದ ಮೇಲೆ ನಿರಂತರವಾಗಿ ನಿರ್ಲಕ್ಷಿಸಲಾಗುತ್ತದೆ. ಜಾತಿ ಕಾರಣಗಳಿಂದ ಅವರಿಗೆ ನಾಯಕತ್ವ ನೀಡುತ್ತಿಲ್ಲ. ಸಾಮಾಜಿಕ ನ್ಯಾಯ ಮತ್ತು ಎಲ್ಲರಿಗೂ ಸಮಾನ ಅವಕಾಶ ಕೇವಲ ಮಾತುಗಳಲ್ಲಿರದೇ, ಕೃತಿಯಲ್ಲೂ ಅದನ್ನು ತೋರ್ಪಡಿಸಬೇಕು. ಪಕ್ಷ ಮತ್ತು ದೇಶವನ್ನು ಬಲಪಡಿಸಲು ಅದನ್ನು ಕಾರ್ಯಗತಗೊಳಿಸಬೇಕು ಎಂದು ಅವರು ಹೇಳಿದ್ದಾರೆ.
ಪ್ರತಿಯೊಂದು ಅವಕಾಶವನ್ನು ಮಂತ್ರಿ ಮಕ್ಕಳಿಗೇ ನೀಡುವುದರಿಂದ ಪಕ್ಷದ ಕಾರ್ಯಕರ್ತರಿಗೆ ಯಾವುದೇ ಸಕಾರಾತ್ಮಕ ಸಂದೇಶವನ್ನು ನೀಡಿದಂತೆ ಆಗುವುದಿಲ್ಲ. ಬದಲಿಗೆ ಅದು ಅವರ ಆತ್ಮಸ್ಥೆರ್ಯವನ್ನು ಕುಗ್ಗಿಸುತ್ತದೆ. ಇದರಿಂದ ರಾಜಕೀಯ ಕ್ಷೇತ್ರದ ಕಡೆಗೆ ಕಡಿಮೆ ಜನರು ಆಕರ್ಷಿತರಾಗುತ್ತದೆ. ರಾಜಕೀಯ ಕ್ಷೇತ್ರವು ಬದಲಾವಣೆ ಬಯಸುವ ಕ್ಷೇತ್ರವಾಗಬೇಕೇ ಹೊರತು ನಿಂತ ನೀರಾಗಬಾರದು ಎಂದು ಕವಿತಾ ರೆಡ್ಡಿ ಹೇಳಿದ್ದಾರೆ.