Breaking:

ಜಿಲ್ಲಾಧಿಕಾರಿ ಹುದ್ದೆಗೆ ರಾಜೀನಾಮೆಗೆ ಕಾರಣ ಬಿಚ್ಚಿಟ್ಟ ಶಶಿಕಾಂತ್ ಸೆಂಥಿಲ್

ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಶಶಿಕಾಂತ್ ಸೆಂಥಿಲ್ ಇದೀಗ ತಮಿಳುನಾಡಿನಲ್ಲಿ ಸಂಸದರಾಗಿದ್ದಾರೆ. ಜಿಲ್ಲಾಧಿಕಾರಿ ಹುದ್ದೆಗೆ ದಿಡೀರ್ ರಾಜೀನಾಮೆ ನೀಡಿ ಎಲ್ಲರನ್ನು ಅಚ್ಚರಿಗೊಳಿಸಿದ್ದ ಶಶಿಕಾಂತ್ ಸೆಂಥಿಲ್ ಇದೀಗ ತನ್ನ ರಾಜೀನಾಮೆಯ ಹಿಂದಿನ ಕಾರಣವನ್ನು ಬಹಿರಂಗಪಡಿಸಿದ್ದಾರೆ.

ಮಂಗಳೂರಿನಲ್ಲಿ ನಾನು ಜಿಲ್ಲಾಧಿಕಾರಿಯಾಗಿದ್ದಾಗ ಹೆಂಡತಿಯೊಟ್ಟಿಗೆ ಕುಳಿತು ಟಿವಿ ನೋಡುವಾಗ, ಆಕೆ ನೀನು ಕಾಲೇಜು ದಿನಗಳಲ್ಲಿ ಎಷ್ಟು ರೆಬೆಲ್ ಆಗಿದ್ದೆ ನೆನಪಿದೆಯಾ.? ಎಂದು ಹೇಳಿದಳು. ಈ ಒಂದೇ ಒಂದು ಮಾತಿನಿಂದ ರಾತ್ರಿಯಿಡೀ ಮನಸ್ಸಿಗೆ ಭಾರಿ ನೋವುಂಟಾಯಿತು.ಮರುದಿನ ಬೆಳಗ್ಗೆ ನನ್ನ ಹೆಂಡತಿಗೆ ಡಿಸಿ ಹುದ್ದೆಗೆ ರಾಜೀನಾಮೆ ಕೊಡುವುದಾಗಿ ತಿಳಿಸಿದೆ. ಆಗ 3 ದಿನದಲ್ಲಿ ನನ್ನ ಎಲ್ಲ ಬಾಕಿ ಕೆಲಸ ಮುಕ್ತಾಯಗೊಳಿಸಿ ಐಎಎಸ್ ಹುದ್ದೆಗೆ ರಾಜೀನಾಮೆ ಕೊಟ್ಟಿದ್ದೇನೆ ಎಂದು ತಮಿಳುನಾಡು ಸಂಸದ ಸಸಿಕಾಂತ್ ಸೇಂಥಿಲ್ ತಮ್ಮ ರಾಜೀನಾಮೆ ಬಗ್ಗೆ ಹೇಳಿದ್ದಾರೆ‌.

ಮಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯ ಈ ವೇದಿಕೆಯಲ್ಲಿ ಬಂದು ಮಾತನಾಡ್ತೀನಿ ಅಂತ ಊಹಿಸಿರಲಿಲ್ಲ. ಎರಡು ವರ್ಷ ಈ ಪಕ್ಷ ಸೇರಿದ ಮೇಲೆ ಸಂಘಟನೆ ಮೇಲೆ ಪ್ರೀತಿ ಆಗಿದೆ. ನಾನು ಇಲ್ಲಿ ರಾಜೀನಾಮೆ ಕೊಟ್ಟು ಕಾರ್ಯದರ್ಶಿಗೆ ಕಳುಹಿಸಿ ಹೋಗಿ ಬಿಟ್ಟೆ. ನನ್ನ ಸಿಬ್ಬಂದಿ ಹಾಗೂ ಹಲವರು ಬೇರೆ ಬೇರೆ ಕಾರಣ ಕೊಟ್ಟರು. ಆದರೆ, ಈವರೆಗೆ ನಾನು ರಾಜೀನಾಮೆಗೆ ಸ್ಪಷ್ಟ ಕಾರಣ ಕೊಟ್ಟಿಲ್ಲ. ಆದರೆ, ಈ ವೇದಿಕೆಯಲ್ಲಿ ಅದಕ್ಕೆ ಸ್ಪಷ್ಟ ಕಾರಣ ಕೊಡಬೇಕು ಎಂದಿದ್ದೇನೆ. ನನ್ನದು ದಲಿತ ಕುಟುಂಬ, ನಾವು ತುಂಬಾ ಬಡವರು. ವ್ಯವಸ್ಥೆಯ ಎಲ್ಲಾ ಕಷ್ಟವನ್ನು ನನ್ನ ತಂದೆ ಅನುಭವಿಸಿದ್ದಾರೆ ಎಂದು ತಮ್ಮ ಕಷ್ಟ ಬಿಚ್ಚಿಟ್ಟರು.

ನಾನು ಐಎಎಸ್ ಆದ ಬಳಿಕವೂ ನನಗೆ ಜನರ ಬಗ್ಗೆಯೇ ಹೆಚ್ಚು ಚಿಂತೆಯಿದೆ. ನಾನು ಜಿಲ್ಲಾಧಿಕಾರಿ ಆಗಿದ್ದಾಗ ನಾನು ರಾತ್ರಿ ಮಲಗಿ ಮಕ್ಕಳ ಬಗ್ಗೆ ಯೋಚಿಸ್ತಾ ಇದ್ದೆ. ಆಗೆಲ್ಲಾ ಮಳೆಗೆ ಡಿಡಿಪಿಐಗೆ ಕರೆ ಮಾಡಿ ಶಾಲೆಗೆ ರಜೆ ಕೊಡಿ ಅಂತಿದ್ದೆ. ಒಮ್ಮೆ ನಿರಂತರವಾಗಿ 17 ದಿನ ದ‌ಕ್ಷಿಣ ಕನ್ನಡ ಜಿಲ್ಲೆಯ ಶಾಲೆಗಳಿಗೆ ರಜೆ ಕೊಟ್ಟಿದ್ದೆನು. ನಾನು ಜನರ ಎಮೋಷನ್ಸ್ ವಿಚಾರದಲ್ಲಿ ತುಂಬಾ ಭಾಗಿಯಾಗುತ್ತಿದ್ದೆ. ಆದರೆ,‌ ಜನರನ್ನ ಜನರ ಮಧ್ಯೆ ಎತ್ತಿ ಕಟ್ಟುವ ರಾಜಕೀಯ ನನಗೆ ನೋಡಲು ಆಗಲಿಲ್ಲ. 2002ರ ಗೋದ್ರಾ ಗಲಾಟೆಯಿಂದಲೇ ನಾನು ಸೂಕ್ಷ್ಮವಾಗಿ ವೀಕ್ಷಿಸುತ್ತಿದ್ದೆ. ಮಂಗಳೂರು ಮಾತ್ರವಲ್ಲದೇ ಇಡೀ ದೇಶದಲ್ಲಿ ಗಮನಿಸ್ತಾ ಇದ್ದೆ. 2014ರಲ್ಲಿ ಗೋದ್ರಾ ಗಲಭೆ ಮಾಡಿದವರೇ ಭಾರತದ ಪ್ರಧಾನಿ ಆದರು. ಆಗ ನಾನು ರಾಯಚೂರಿನಲ್ಲಿ ಜಿಲ್ಲಾಧಿಕಾರಿ ಆಗಿದ್ದೆ. ನಂತರ, 2019ರ ಚುನಾವಣೆಯಲ್ಲಿ ನಾನು ದಕ್ಷಿಣ ಕನ್ನಡ ಡಿಸಿಯಾಗಿದ್ದೆ. ಆಗ ಲೋಕಸಭಾ ಚುನಾವಣೆ ನಡೆದು ಮತ್ತೆ ಬಿಜೆಪಿಗೆ ಹೆಚ್ಚು ಮತಗಳು ಬಿದ್ದು, ಅವರೇ ಪ್ರಧಾನಿಯಾದರು. ಆದರೆ ನಾನು ಜಿಲ್ಲಾಧಿಕಾರಿ ಆಗಿದ್ದರಿಂದ ಜನರಿಗೆ ಯಾವುದೇ ಬೇದಭಾವ ಮಾಡಲಿಲ್ಲ ಎಂದು ಸಸಿಕಾಂತ್ ಸೆಂಥಿಲ್ ಹೇಳಿದ್ದಾರೆ‌.

Share this article

ಟಾಪ್ ನ್ಯೂಸ್