ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ, ಪ್ರಕರಣಕ್ಕೆ ಸಂಬಂಧಿಸಿ ಅಧಿಕಾರಿಗಳು ಅನೇಕ ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಸ್ಥಳೀಯ ನಾಯಕ ಶಹಜಾದ್ ಅಲಿ ಅವರ ಬಂಗಲೆಯನ್ನು ಕೆಡವಿದ್ದಾರೆ.
ಆಗಸ್ಟ್ 21ರಂದು ಮಧ್ಯಾಹ್ನ 2.45ರ ಸುಮಾರಿಗೆ, ಸ್ಥಳೀಯ ಮುಖಂಡರಾದ ಜಾವೇದ್ ಅಲಿ ಮತ್ತು ಶಹಜಾದ್ ಅಲಿ ನೇತೃತ್ವದಲ್ಲಿ ಮುಸ್ಲಿಂ ಸಮುದಾಯದ 100-150 ಸದಸ್ಯರ ಗುಂಪು ಛತ್ತರ್‌ಪುರ ಜಿಲ್ಲೆಯ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರವಾದಿ ಬಗ್ಗೆ ನಿಂದಿಸಿದ ಮಹಾರಾಷ್ಟ್ರದ ಮಹಂತ್ ರಾಮಗಿರಿ ಮಹಾರಾಜ್ ವಿರುದ್ಧ ದೂರು ನೀಡಲು ಜಮಾಯಿಸಿದ್ದರು. ಈ ವೇಳೆ ಕೆಲವರು ಪೊಲೀಸರ ಮೇಲೆ ಕಲ್ಲು ತೂರಾಟ ಆರಂಭಿಸಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ, ಇದರಿಂದ ಹಲವು ಸಿಬ್ಬಂದಿಗೆ ಗಾಯಗಳಾಗಿವೆ.
ಪ್ರಥಮವಾಗಿ ನಗರದ ಮಸ್ತಾನ್ ಸಾಹೇಬ್ ಕಾಲೋನಿಯಲ್ಲಿರುವ ಹಾಜಿ ಶಹಜಾದ್ ಅಲಿ ವೈಭವೋಪೇತ ಮನೆ ಮೇಲೆ ಬುಲ್ಡೋಜರ್ ದಾಳಿ ನಡೆಸಲಾಗಿದೆ. ಅಂಜುಮನ್ ಇಸ್ಲಾಮಿಯಾ ಸಮಿತಿಯ ಮಾಜಿ ಸದರ್ ಮತ್ತು ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಹಾಜಿ ಶಹಜಾದ್ ಮನೆಯೊಳಗೆ ಇರಿಸಲಾಗಿದ್ದ ಮೂರು ಕಾರುಗಳನ್ನು ಕ್ರೇನ್ ಯಂತ್ರದ ಮೂಲಕ ಹೊರತೆಗೆದು ನಂತರ ಬುಲ್ಡೋಜರ್‌ನಿಂದ ಪುಡಿ ಮಾಡಲಾಯಿತು. ಸದ್ಯ ಶಹಜಾದ್ ಅಲಿ ಅವರ ಈ ಐಷಾರಾಮಿ ಮನೆಯಲ್ಲಿ ಯಾರೂ ವಾಸಿಸುತ್ತಿಲ್ಲ, ಏಕೆಂದರೆ ಅದು ಇನ್ನೂ ಪೂರ್ಣಗೊಂಡಿಲ್ಲ ಎಂದು ಹೇಳಲಾಗುತ್ತಿದೆ. ಆದರೆ ಇದು ನೋಡಲು ಸಾಕಷ್ಟು ದೊಡ್ಡದಾಗಿದೆ ಮತ್ತು ಐಷಾರಾಮಿಯಾಗಿತ್ತು.
ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ನಡೆದ ಕಲ್ಲು ತೂರಾಟದಲ್ಲಿ ಶಹಜಾದ್ ಅಲಿ ಹೆಸರು ಸೇರಿದ್ದು, ಅವರ ವಿರುದ್ಧ ಎಫ್‌ಐಆರ್ ಕೂಡ ದಾಖಲಾಗಿದೆ ಎಂದು ತಿಳಿಸಲಾಗಿದೆ. ಕಲ್ಲು ತೂರಾಟ ಮತ್ತು ಗಲಭೆಯಲ್ಲಿ ತೊಡಗಿದ್ದ 150 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಎಫ್‌ಐಆರ್‌ನಲ್ಲಿ 50 ಮತ್ತು ಇತರ 100 ಜನರನ್ನು ಹೆಸರಿಸಲಾಗಿದೆ. ವೀಡಿಯೋಗ್ರಫಿ ಆಧಾರದ ಮೇಲೆ ಗುರುತಿಸಿದವರ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ.