ಬೆಂಗಳೂರು:ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ಅನುಮತಿ ನೀಡಿರುವ ಆದೇಶದ ಕುರಿತ ವಿಚಾರಣೆಯನ್ನು ಮತ್ತೆ ಕರ್ನಾಟಕ ಹೈಕೋರ್ಟ್ ಮುಂದೂಡಿದೆ.
ಈ ಬಗ್ಗೆ ಹೈಕೋರ್ಟ್ ನಲ್ಲಿ ಇಂದು ನ್ಯಾಯಮೂರ್ತಿ ನಾಗಪ್ರಸನ್ನ ಅವರ ಏಕಪೀಠ ವಿಚಾರಣೆ ನಡೆಸಿತು. ವಾದ ಆಲಿಸಿದ ಪೀಠವು ವಿಚಾರಣೆನ್ನು ಆಗಸ್ಟ್ 31ಕ್ಕೆ ಮುಂದೂಡಿದೆ.
ಸಿಎಂ ಪರವಾಗಿ ವಾದ ಆರಂಭಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು, ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಸಿದ್ದರಾಮಯ್ಯ ಅವರ ವಿರುದ್ಧ ಕೇಳಿಬಂದ ಆರೋಪಗಳಿಗೆ ಯಾವುದೇ ಶೋಕಾಸ್ ನೋಟಿಸ್ ನೀಡದೆ ನೇರವಾಗಿ ಪ್ರಾಸಿಕ್ಯೂಶನ್ ಗೆ ಅನುಮತಿ ನೀಡಿದೆ. ಜತೆಗೆ ರಾಜ್ಯಪಾಲರು ಸಚಿವ ಸಂಪುಟ ಸಭೆಯ ಸಲಹೆಯನ್ನು ಪಡೆಯದೇ ತರಾತುರಿಯಲ್ಲಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ಕೊಟ್ಟಿದ್ದಾರೆ. ಹೀಗಾಗಿ, ರಾಜ್ಯಪಾಲರ ಅನುಮತಿಯನ್ನು ರದ್ದು ಪಡಿಸಬೇಕು ಎಂದು ವಾದ ಮಂಡಿಸಿದರು.
ಇದಲ್ಲದೆ ಶಶಿಕಲಾ ಜೊಲ್ಲೆ, ಹೆಚ್.ಡಿ ಕುಮಾರಸ್ವಾಮಿ ಸೇರಿದಂತೆ ವಿವಿಧ ರಾಜಕೀಯ ನಾಯಕರ ವಿರುದ್ಧದ ಪ್ರಾಸಿಕ್ಯೂಷನ್ ಗೆ ಅನುಮತಿ ಕೋರಿ ರಾಜ್ಯಪಾಲರಿಗೆ ಅರ್ಜಿ ಸಲ್ಲಿಸಿದ್ದರೂ ಈವರೆಗೆ ಯಾವುದೇ ಉತ್ತರ ನೀಡಿಲ್ಲ. ಆದರೆ ಸಿದ್ಧರಾಮಯ್ಯ ವಿರುದ್ಧದ ಮುಡಾ ಹಗರಣದಲ್ಲಿ ಅನುಮತಿ ಕೋರಿದ ಕೆಲವೇ ದಿನಗಳಲ್ಲಿ ನೀಡಲಾಗಿದೆ ಎಂಬುದಾಗಿ ವಾದಿಸಿದರು.
ಈ ವಾದವನ್ನು ಆಲಿಸಿದ ನಂತ್ರ ಹೈಕೋರ್ಟ್, ಪ್ರತಿವಾದಿಗಳ ವಾದವನ್ನು ಆಲಿಸುವುದಕ್ಕೆ ಸಮಯಾವಕಾಶ ಕೋರಿದ ಕಾರಣ ಆ.31ರ ಶನಿವಾರ ಬೆಳಿಗ್ಗೆ 10.30ಕ್ಕೆ ವಿಚಾರಣೆಯನ್ನು ಮುಂದೂಡಿದೆ.