ನಿಯಂತ್ರಣ ತಪ್ಪಿ ಕಾರು ಮಗುಚಿ ಬಿದ್ದ ಪರಿಣಾಮ ಓರ್ವ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟು, ಮೂವರು ಗಾಯಗೊಂಡ ಘಟನೆ ಕಾಸರಗೋಡು ರಾಣಿಪುರ ಸಮೀಪದ ಪೆರುತ್ತಡಿ ಎಂಬಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ
ಸುರತ್ಕಲ್ ಎನ್ ಐ ಟಿ ಕೆ ಯ ವಿದ್ಯಾರ್ಥಿ ರಾಯಚೂರು ನಿವಾಸಿ ಆರಿಬುದ್ದೀನ್ (21) ಮೃತರು. ಇನ್ನು ಗಾಯಗೊಂಡವರನ್ನು ಪೂಡಂಕಲ್ ನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರಿನಲ್ಲಿ ನಾಲ್ವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಪ್ರವಾಸಿ ಕೇಂದ್ರವಾದ ರಾಣಿಪುರಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಚರಂಡಿಗೆ ಬಿದ್ದು ಅವಘಡ ಸಂಭವಿಸಿದೆ.
ರಾಜಾಪುರ ಠಾಣೆ ಪೊಲೀಸರು ಅಪಘಾತಕ್ಕೀಡಾದ ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ.