ನವದೆಹಲಿ: ಕಾಲೇಜು ಕ್ಯಾಂಪಸ್‌ನಲ್ಲಿ ಹಿಜಾಬ್, ಬುರ್ಖಾ, ಟೋಪಿ ಮತ್ತು ನಖಾಬ್ ನಿಷೇಧಿಸಿ ಹೊರಡಿಸಿದ್ದ ಮುಂಬೈ ಕಾಲೇಜೊಂದರ ಸುತ್ತೋಲೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ.
ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಸಂಜಯ್ ಕುಮಾರ್ ಅವರ ಪೀಠವು ಚೆಂಬೂರ್ ಟ್ರಾಂಬೆ ಎಜುಕೇಶನ್ ಸೊಸೈಟಿ ನಡೆಸುತ್ತಿರುವ ಎನ್.ಜಿ. ಆಚಾರ್ಯ ಮತ್ತು ಡಿ.ಕೆ. ಮರಾಠೆ ಕಾಲೇಜಿಗೆ ನೋಟಿಸ್ ಜಾರಿ ಮಾಡಿ, ನವೆಂಬರ್ 18 ರೊಳಗೆ ಅದರ ಪ್ರತಿಕ್ರಿಯೆಯನ್ನು ಕೇಳಿದೆ.
ದೇಶದಲ್ಲಿ ಅನೇಕ ಧರ್ಮಗಳಿವೆ ಎಂದು ನಿಮಗೆ ಈಗ ಗೊತ್ತಾಗಿರುವುದು ದುರದೃಷ್ಟಕರ. ವಿದ್ಯಾರ್ಥಿಗಳ ಧಾರ್ಮಿಕ ನಂಬಿಕೆಗಳು ಬಹಿರಂಗಗೊಳ್ಳಬಾರದು ಎಂಬ ಉದ್ದೇಶವಿದ್ದಲ್ಲಿ ‘ತಿಲಕ’ ಮತ್ತು ‘ಬಿಂದಿ’ಯನ್ನು ಏಕೆ ನಿಷೇಧಿಸಲಿಲ್ಲ? ವಿದ್ಯಾರ್ಥಿಗಳ ಹೆಸರು ಅವರ ಧಾರ್ಮಿಕ ಗುರುತನ್ನು ಬಹಿರಂಗಪಡಿಸುವುದಿಲ್ಲವೇ? ಎಂದು ಎಜುಕೇಶನ್ ಸೊಸೈಟಿ ಪರ ವಕೀಲರಾದ ಮಾಧವಿ ದಿವಾನ್ ಅವರನ್ನು ಪೀಠ ಕೇಳಿತು.
ಧರಿಸುವ ವಸ್ತ್ರ ‘ಆಯ್ಕೆ’ಯ ಸ್ವಾತಂತ್ರ್ಯವನ್ನು ಹೊಂದಿರಬೇಕು. ಶಿಕ್ಷಣ ಸಂಸ್ಥೆಗಳು ತಮ್ಮ ಆಯ್ಕೆಯನ್ನು ಅವರ ಮೇಲೆ ಹೇರುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಕ್ಯಾಂಪಸ್‌ನೊಳಗೆ ಹಿಜಾಬ್, ಬುರ್ಖಾ ಮತ್ತು ನಖಾಬ್ ನಿಷೇಧಿಸುವ ಕಾಲೇಜಿನ ನಿರ್ಧಾರವನ್ನು ಎತ್ತಿಹಿಡಿದ ಬಾಂಬೆ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಅರ್ಜಿದಾರ ಜೈನಾಬ್ ಅಬ್ದುಲ್ ಖಯೂಮ್ ಮತ್ತಿತರರ ಪರ ವಾದ ಮಂಡಿಸಿದ ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವೆಸ್ ಮತ್ತು ಅಬಿಹಾ ಜೈದಿ, ನಿಷೇಧದಿಂದ ವಿದ್ಯಾರ್ಥಿಗಳಿಗೆ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಕೋರ್ಟ್ ಗಮನಕ್ಕೆ ತಂದಿದ್ದಾರೆ.